ಸಿದ್ದರಾಮೇಶ್ವರ ಮಹಾನ್‌ ಜ್ಞಾನಯೋಗಿ: ಅಪರ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ

| Published : Jan 15 2025, 12:46 AM IST

ಸಿದ್ದರಾಮೇಶ್ವರ ಮಹಾನ್‌ ಜ್ಞಾನಯೋಗಿ: ಅಪರ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನ್ ದಾರ್ಶನಿಕರು ಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ, ತಮ್ಮ ಜ್ಞಾನ, ಭಕ್ತಿಯನ್ನು ಧಾರೆ ಎರೆದು ಸಮಾಜದ ಒಳಿತಿಗಾಗಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಕಾರವಾರ: ಶಿವಯೋಗಿ ಸಿದ್ದರಾಮೇಶ್ವರಂಥ ಮಹಾನ್ ವ್ಯಕ್ತಿಗಳ ಆದರ್ಶ, ತತ್ವಗಳು, ಸಾಧನೆಗಳನ್ನು ಯುವಪೀಳಿಗೆಯು ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಅವುಗಳನ್ನು ಪಾಲನೆ ಮಾಡುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು‌ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಹಾನ್ ದಾರ್ಶನಿಕರು ಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ, ತಮ್ಮ ಜ್ಞಾನ, ಭಕ್ತಿಯನ್ನು ಧಾರೆ ಎರೆದು ಸಮಾಜದ ಒಳಿತಿಗಾಗಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ ಅವರು ನಡೆದು ಬಂದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಲಿ ಎಂದು ಸರ್ಕಾರ ಜಯಂತಿಗಳನ್ನು‌ ಆಚರಿಸಿಕೊಂಡು ಬಂದಿದೆ ಎಂದರು.ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗೆ ಸೀಮಿತವಾಗದೆ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶಕ್ಕೆ, ಸಮಾಜಕ್ಕೆ, ತಂದೆ- ತಾಯಿಗಳಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಕೇವಲ ಅಧಿಕಾರಕ್ಕೆ ಬೆಲೆ ಕೊಡುವ ವ್ಯಕ್ತಿಗಳಾಗದೆ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತ ಉತ್ತಮ ಪ್ರಜೆಗಳಾಗಿ ಚಿಗುರಬೇಕು ಎಂದರು.

ಶಿಕ್ಷಕಿ ವನಿತಾ ಶೆಟ್ ವಿಶೇಷ ಉಪನ್ಯಾಸ ನೀಡಿ, 12ನೇ ಶತಮಾನದ ವ್ಯಕ್ತಿಯನ್ನು ಇಂದಿಗೂ ಸ್ಮರಿಸಿಕೊಳ್ಳಲು ಅವರ ಹಾಕಿಕೊಟ್ಟ ಆದರ್ಶ, ತತ್ವ ಮಾರ್ಗಗಳು‌, ಸಾಧನೆಗಳು ಕಾರಣವಾಗಿದ್ದು, ಇವು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಶಿವನನ್ನೇ ಧರೆಗೆ ಇಳಿಸಿದ ಮಹಾನ್ ವ್ಯಕ್ತಿ ಶಿವಯೋಗಿ ಸಿದ್ದರಾಮ ಎಂದರು.

ವೈದಿಕ ಧರ್ಮದ ಮೌಢ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದವರು. ಕೆರೆ ಕಟ್ಟೆಗಳನ್ನು, ದೇವಾಲಯಗಳು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟಿದರು. ಹಾಗೆಯೇ ಸಾಮೂಹಿಕ ವಿವಾಹಗಳನ್ನು ಮಾಡಿಸಿದರು. ಅವರು ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ,‌ ಕರ್ಮಯೋಗಿಯಾಗಿ ಅಕ್ಷರ ಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು‌ ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ, ಅಧಿಕಾರಿಗಳು, ಸಿಬ್ಬಂದಿ, ಶಿವಯೋಗಿ ಸಿದ್ದರಾಮೇಶ್ವರ ಸಮುದಾಯದ ಅಧ್ಯಕ್ಷ ಭರಮಪ್ಪ ಕಟ್ಟಿಮನಿ, ಪದವಿಪೂರ್ವ ಕಾಲೇಜಿನ ಉಪನಿರ್ದೇಶಕ, ಸೆಂಟ್ ಜೋಸೆಫ್, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಸಮಾನತೆಗೆ ಶ್ರಮಿಸಿದ ಸಿದ್ದರಾಮೇಶ್ವರರು

ಮುಂಡಗೋಡ: ೧೨ನೇ ಶತಮಾನದಲ್ಲಿ ಕೆಳ ವರ್ಗದವರಿಗೆ ಸಮಾನತೆ ಒದಗಿಸಲು ಸಿದ್ದರಾಮೇಶ್ವರರು ಪ್ರಮುಖ ಪಾತ್ರ ವಹಿಸಿದರು ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ತಿಳಿಸಿದರು.ಮಂಗಳವಾರ ಪಟ್ಟಣದ ಮಿನಿ ವಿಧಾನಸೌದ ಬಳಿಯ ಶಿವಯೋಗಿ ಸಿದ್ದರಾಮೇಶ್ವರ ಗದ್ದುಗೆ ಆವರಣದಲ್ಲಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಉದ್ಯೋಗಕ್ಕೆ ಕಾಯಕ ಎಂಬ ಶಬ್ದ ಬಂದಿದ್ದೇ ೧೨ನೇ ಶತಮಾನದಲ್ಲಿ. ಮಹಾಪುರುಷರು ಜನಿಸಿದ ೧೨ನೇ ಶತಮಾನ ಸುವರ್ಣ ಯುಗವಾಯಿತು ಎಂದರು.ಪಪಂ ಅಧ್ಯಕ್ಷೆ ಜಯಸುಧಾ ಬಸವರಾಜ ಬೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಬೋವಿ ಸಮಾಜದ ಅಧ್ಯಕ್ಷ ದಯಾನಂದ ಕಳಸಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಹನ್ಮಂತಪ್ಪ ಆರೇಗೊಪ್ಪ, ರಾಮಕೃಷ್ಣ ಮೂಲಿಮನಿ, ಶ್ರೀಕಾಂತ ಸಾನು, ಚಿದಾನಂದ ಹರಿಜನ, ಶಿವಾನಂದ ಕುರುಬರ, ದಾಸ ದಾವಣಗೇರೆ, ದುರ್ಗಪ್ಪ ವಡ್ಡರ, ಭೀಮಣ್ಣ ಬೋವಿ, ಸುಭಾಸ ವಡ್ಡರ, ರಮೇಶ ಅಂಬಿಗೇರ ಮುಂತಾದವರಿದ್ದರು. ಕೆ.ಕೆ. ಕುರುವಿನಕೊಪ್ಪ ಸ್ವಾಗತಿಸಿ, ನಿರೂಪಿಸಿದರು.

ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶಾಸಕ ಶಿವರಾಮ ಹೆಬ್ಬಾರ ಅವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು.