ಇತಿಹಾಸವುಳ್ಳ ಹಾಗೂ ಭಕ್ತರ ಪಾಲಿನ ಆಪತ್ಬಾಂಧವ ಸಿದ್ದರಾಮೇಶ್ವರ ದೇವರು ಎಂಬ ಮಾತು ಕೇಳಿದ್ದೇನೆ. ಮಾದನಾಯಕನಹಳ್ಳಿ ರಾಜಣ್ಣ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ದೇವಸ್ಥಾನ ತುಂಬಾ ಸುಂದರ ಹಾಗೂ ಅದ್ಭುತವಾಗಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಂಕಷ್ಟದಲ್ಲಿರುವವರಿಗೆ ಶ್ರೀರಕ್ಷೆಯಾಗಿದ್ದ ಶ್ರೀಸಿದ್ದರಾಮೇಶ್ವರಸ್ವಾಮಿ ಭಕ್ತರ ಅಪತ್ಪಾಂಧವರಾಗಿ ಕಾಪಾಡುವ ಪ್ರಸಿದ್ಧ ದೇವಸ್ಥಾನ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಮಾದನಾಯಕನಹಳ್ಳಿ ಶ್ರೀಸಿದ್ದರಾಮೇಶ್ವರಸ್ವಾಮಿ ದೇವಸ್ಥಾನದ ರಾಜಗೋಪುರ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸವುಳ್ಳ ಹಾಗೂ ಭಕ್ತರ ಪಾಲಿನ ಆಪತ್ಬಾಂಧವ ಸಿದ್ದರಾಮೇಶ್ವರ ದೇವರು ಎಂಬ ಮಾತು ಕೇಳಿದ್ದೇನೆ. ಮಾದನಾಯಕನಹಳ್ಳಿ ರಾಜಣ್ಣ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ದೇವಸ್ಥಾನ ತುಂಬಾ ಸುಂದರ ಹಾಗೂ ಅದ್ಭುತವಾಗಿ ನಿರ್ಮಾಣವಾಗಿದೆ ಎಂದರು.

ಶ್ರೀಪಟ್ಟಲದಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಭಕ್ತರ ಸಹಾಯದಿಂದ ಸುಮಾರು ಏಳು ಕೋಟಿ ರು. ವೆಚ್ಚದಲ್ಲಿ ಸುಂದರ ದೇವಾಲಯವನ್ನು ಕಟ್ಟುವ ಮೂಲಕ ಇಂದು ರಾಜಗೋಪುರ ಹಾಗೂ ಮಹಾಕುಂಭಾಭಿಷೇಕ ಮಾಡಲಾಗಿದೆ ಎಂದರು.

ಇಂದು ಬೆಳಗ್ಗೆ ಸುಪ್ರಭಾತ ಸೇವೆ, ಮಂಗಳವಾದ್ಯ, ವೇದಪಾರಾಯಣ, ಮಹಾ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಪಂಚಕವ್ಯ ಕ್ರಿಯೆ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾನ್ಯಾಸ, ಪೂರ್ವಕ ರುದ್ರಾಭಿಷೇಕ. ರುದ್ರ ಹೋಮ, 108 ದ್ರವ್ಯಾಹುತಿ, ಮಹಾಪೂರ್ಣಾಹುತಿ, ಕಳಸ ಉದ್ವಾಸನೆ, ಶ್ರೀತೈಲೂರಮ್ಮ, ಶ್ರೀಮಲ್ಲಮ್ಮ, ಶ್ರೀ ಮಂಚಮ್ಮ, ಶ್ರೀ ಹುಚ್ಚಮ್ಮ, ತಿಪ್ಪೂರು ಶ್ರೀ ಆಂಜನೇಯಸ್ವಾಮಿ, ಬ್ಯಾಡ್ರಳ್ಳಿ ಆಂಜನೇಯ ಸ್ವಾಮಿ, ಭೂತೂರು ಅಂಕನಾಥೇಶ್ವರ ಹಾಗೂ ಗ್ರಾಮದ ಎಲ್ಲಾ ದೇವರುಗಳು ಒಳಗೊಂಡು ದೇವಾಲಯ ಪ್ರದಕ್ಷಿಣಾ ಪೂರ್ಣಕ ರಾಜಗೋಪರಕ್ಕೆ ಮಹಾ ಕುಂಭಾಭಿಷೇಕ ಮಹಾಮಂಗಳಾರತಿ ನಡೆಯಿತು.

ನಂತ ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿಗಳು ಭಾಗವಹಿಸಿ ಆಶೀರ್ವಚನ ನೀಡಿದರು. ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಮಧು ಜಿ. ಮಾದೇಗೌಡ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ದೇವತಾ ಕಾರ್ಯವನ್ನು ವಿಶ್ವಾಸ ದೀಕ್ಷಿತ್, ಪ್ರವೀಣ್ ತಂತ್ರಿ ಮತ್ತು ತಂಡ ಉಡುಪಿ ನೆರವೇರಿಸಿದರು. ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ದೀಕ್ಷಿತ್, ಕಾರ್ಯದರ್ಶಿ ಮಲ್ಲಯ್ಯ, ಸಹಕಾರಿ ಮಹೇಶ್, ಖಜಾಂಚಿ ಗಿರೀಶ್ ಕುಮಾರ್ , ಟ್ರಸ್ಟ್ ನ ಸದಸ್ಯರು ಪದಾಧಿಕಾರಿಗಳು ಗ್ರಾಮದ ಯಜಮಾನರು ಭಾಗವಹಿಸಿದ್ದರು.