Siddartha Basarigida Appointed as Director of Keonics

- ಬಡದಾಳ ಗ್ರಾಮದ ಅಭಿಮಾನಿಗಳಿಂದ ಹರ್ಷ ವ್ಯಕ್ತ

------------

ಕನ್ನಡಪ್ರಭ ವಾರ್ತೆ ಅಫಜಲಪುರ ಬಡದಾಳ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಖ್ಯಾತ ವಕೀಲ ಸಿದ್ದಾರ್ಥ ಬಸರಿಗಿಡ ಅವರನ್ನು ರಾಜ್ಯ ಸರ್ಕಾರ ಕಿಯೋನಿಕ್ಸ್ (ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ) ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಕ್ಕೆ ಬಡದಾಳ ಗ್ರಾಮದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಡಾ. ಉದಯಕುಮಾರ್ ವಾಡೆಕರ, ಚಂದ್ರಕಾಂತ ಸಿಂಗೆ ಹಾಗೂ ಚನ್ನಬಸವ ದೊಡ್ಮನಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಸಿದ್ದಾರ್ಥ ಬಸರಿಗಿಡ ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಎಲ್ಲ ಸಮುದಾಯಗಳ ಜನರ ವಿಶ್ವಾಸ ಮತ್ತು ಪ್ರೀತಿ ಗಳಿಸಿದ್ದಾರೆ. ಹಿರಿಯ ಶಾಸಕ ಎಂ.ವೈ. ಪಾಟೀಲ ಅವರ ನಿಷ್ಠಾವಂತ ಬೆಂಬಲಿಗರಾಗಿ ಪಕ್ಷ ಸಂಘಟನೆ ಹಾಗೂ ಜನಪರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.ಬಡದಾಳ ಜಿಲ್ಲಾ ಪಂಚಾಯಿತಿ ಮೀಸಲು ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗುವ ಅವಕಾಶ ಅವರಿಗೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೀಸಲಾತಿ ಬದಲಾವಣೆಯಿಂದಾಗಿ ಆ ಅವಕಾಶ ಕೈತಪ್ಪಿತ್ತು. ಈ ನಡುವೆ ಅವರೊಂದಿಗೆ ಗುರುತಿಸಿಕೊಂಡಿದ್ದ ಹಲವು ಪ್ರಮುಖ ನಾಯಕರಿಗೆ ವಿವಿಧ ಸ್ಥಾನಮಾನಗಳು ದೊರೆತಿದ್ದವು. ಇದೀಗ ಶಾಸಕ ಎಂ.ವೈ. ಪಾಟೀಲ ಹಾಗೂ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಬಸರಿಗಿಡ ಅವರ ರಾಜಕೀಯ ಸೇವೆಯನ್ನು ಗುರುತಿಸಿ ಕಿಯೋನಿಕ್ಸ್ ನಿರ್ದೇಶಕ ಸ್ಥಾನ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಪಕ್ಷಕ್ಕಾಗಿ ಹಾಗೂ ನಾಯಕರಿಗಾಗಿ ನಿಸ್ವಾರ್ಥವಾಗಿ ದುಡಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ದೊರೆತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಸಿದ್ದಾರ್ಥ ಬಸರಿಗಿಡ ಅವರಿಗೆ ಇನ್ನೂ ಹೆಚ್ಚಿನ ರಾಜಕೀಯ ಜವಾಬ್ದಾರಿ ಹಾಗೂ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಶುಭ ಹಾರೈಸಿದರು.

----ಫೋಟೊ----ಫಟೋ- ಸಿದ್ದಾರ್ಥ