ಗೊರವಾಲೆ ಅಭಿವೃದ್ಧಿಗೆ ಶ್ರಮಿಸಿದ ಸಿದ್ದೇಗೌಡರು: ನಿಖಿಲ್ ಕುಮಾರಸ್ವಾಮಿ

| Published : Sep 01 2025, 01:03 AM IST

ಗೊರವಾಲೆ ಅಭಿವೃದ್ಧಿಗೆ ಶ್ರಮಿಸಿದ ಸಿದ್ದೇಗೌಡರು: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಜನರು ರಾಜಕೀಯ ಪುನರ್ಜನ್ಮ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ದೊರಕಿಸಿದರು. ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದರೂ ಅವರ ಮನಸ್ಸು ಮಾತ್ರ ಮಂಡ್ಯದಲ್ಲೇ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗೊರವಾಲೆ ಪಟೇಲ್ ಸಿದ್ದೇಗೌಡರು ಗ್ರಾಮದ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ದುದ್ದ ಸಮೀಪದ ಗೊರವಾಲೆ ಗ್ರಾಮದಲ್ಲಿ ಪಟೇಲ್ ಸಿದ್ದೇಗೌಡರ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಪಟೇಲ್ ಸಿದ್ದೇಗೌಡರ ಪ್ರತಿಮೆಯನ್ನು ಮಾಜಿ ಪ್ರಧಾನಿ ದೇವೇಗೌಡರಿಂದ ಅನಾವರಣ ಮಾಡಿಸಬೇಕೆಂದು ಗ್ರಾಮಸ್ಥರು ಬಯಸಿದ್ದರು. ಕುಮಾರಣ್ಣ ಬರಬೇಕು ಎಂದು ಹೇಳುತ್ತಿದ್ದರು ಆದರೆ, ಅವರ ಕೆಲಸದ ಒತ್ತಡದಿಂದ ಬರಲು ಆಗದ ಕಾರಣ ಪುತ್ಥಳಿ ಅನಾವರಣವನ್ನು ನಾವು ಮಾಡಿದ್ದೇವೆ ಎಂದರು.

ಕುಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ಜನರು ರಾಜಕೀಯ ಪುನರ್ಜನ್ಮ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ದೊರಕಿಸಿದರು. ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದರೂ ಅವರ ಮನಸ್ಸು ಮಾತ್ರ ಮಂಡ್ಯದಲ್ಲೇ ಇದೆ. ಜಿಲ್ಲೆಯ ಜನರ ಋಣ ತೀರಿಸಲು ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ನಿಂತಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗೊರವಾಲೆ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಿರುವುದಕ್ಕೆ ಪಟೇಲ್ ಸಿದ್ದೇಗೌಡರು ಪ್ರಮುಖ ಕಾರಣವೆಂದು ಎಲ್ಲರೂ ಹೇಳುತ್ತಾರೆ. ಗೊರವಾಲೆ ಗ್ರಾಮದ ಕಲ್ಯಾಣ ಮಂಟಪವನ್ನು ಪಟೇಲ್ ಸಿದ್ದೇಗೌಡರ ಹೆಸರಿನಲ್ಲಿ ನಿರ್ಮಾಣ ಮಾಡಿ ಅದನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ದುದ್ದ ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಲ್ಲಲು ಬಿಡಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗದಲ್ಲಿ ಮಾಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಗೊರವಾಲೆ ಗ್ರಾಮವನ್ನು ಮರೆಯಲು ಸಾಧ್ಯವಿಲ್ಲ. ಚುನಾವಣೆ ಸಮಯದಲ್ಲೂ ಅತಿ ಹೆಚ್ಚು ಮತಗಳನ್ನು ನಮಗೆ ಕೊಡುವ ಮೂಲಕ ನಮ್ಮ ಪರ ಇದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಜೆಡಿಎಸ್ ಮುಖಂಡರಾದ ಎಚ್.ಟಿ.ಬಾಲರಾಜು, ಪುರದಕೊಪ್ಪಲು ಶಂಕರೇಗೌಡ, ಆರ್‌ಎಪಿಸಿಎಂಎಸ್ ಮಾಜಿ ನಿರ್ದೇಶಕ ಜಿ.ಎಲ್.ಸತೀಶ್, ಜಿ.ಎಸ್.ಕೃಷ್ಣೇಗೌಡ, ಸಿದ್ದೇಗೌಡ, ಹೊಳಲು ಯೋಗೇಶ್ ಸೇರಿದಂತೆ ಇತರರಿದ್ದರು.