ಸಿದ್ದೇಶ್ವರ ಇದುವರೆಗೂ ಸ್ವಂತ ಬಲ, ವರ್ಚಸ್ಸಿನಿಂದ ಗೆದ್ದಿಲ್ಲ

| Published : Jun 05 2024, 12:30 AM IST

ಸಿದ್ದೇಶ್ವರ ಇದುವರೆಗೂ ಸ್ವಂತ ಬಲ, ವರ್ಚಸ್ಸಿನಿಂದ ಗೆದ್ದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಕ್ಷೇತ್ರದಲ್ಲಿ ಐದು ಸಲ ಬಿಜೆಪಿ ಗೆದ್ದಿರುವುದು ಸಿದ್ದೇಶ್ವರ ಸ್ವಂತ ಶ್ರಮದಿಂದಲ್ಲ. ತಂದೆ ಸಾವಿನ ಅನುಕಂಪ, ಮೋದಿ ಅಲೆ, ಸ್ವಾಮಿಗಳ ಆಶೀರ್ವಾದದಿಂದಷ್ಟೇ. ಅದನ್ನೆಲ್ಲಾ ಅರಿತ ಕ್ಷೇತ್ರದ ಮತದಾರರು ಈ ಸಲ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಕಡೆಗೂ ಜನತೆ ಅರ್ಥ ಮಾಡಿಕೊಂಡು ಡಾ.ಪ್ರಭಾಗೆ ಮತ ನೀಡಿ ಗೆಲ್ಲಿಸಿದ್ದಾರೆಂದ ಸಚಿವ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಕ್ಷೇತ್ರದಲ್ಲಿ ಐದು ಸಲ ಬಿಜೆಪಿ ಗೆದ್ದಿರುವುದು ಸಿದ್ದೇಶ್ವರ ಸ್ವಂತ ಶ್ರಮದಿಂದಲ್ಲ. ತಂದೆ ಸಾವಿನ ಅನುಕಂಪ, ಮೋದಿ ಅಲೆ, ಸ್ವಾಮಿಗಳ ಆಶೀರ್ವಾದದಿಂದಷ್ಟೇ. ಅದನ್ನೆಲ್ಲಾ ಅರಿತ ಕ್ಷೇತ್ರದ ಮತದಾರರು ಈ ಸಲ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಿವಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಫಲಿತಾಂಶ ಪ್ರಕಟಗೊಂಡ ನಂತರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ವಿಜಯಿ ಅಭ್ಯರ್ಥಿಯಾಗಿ ಪ್ರಮಾಣಪತ್ರ ಸ್ವೀಕರಿಸಲು ಜೊತೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಾ.ಪ್ರಭಾ ಅವರನ್ನು ಗೆಲ್ಲಿಸಿದ ಕ್ಷೇತ್ರದ ಸಮಸ್ತ ಮತದಾರರಿಗೆ ಅಭಿನಂದಿಸುತ್ತೇನೆ. ಮತದಾರರ ಆಶೀರ್ವಾದದಿಂದ ನಾವು ಗೆದ್ದಿದ್ದೇವೆ. ಅಲ್ಲದೇ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಪರಿಶ್ರಮವೂ ದೊಡ್ಡದಿದೆ ಎಂದು ತಿಳಿಸಿದರು.

ಇಡೀ ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗುವುದು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಚುನಾವಣೆಯಲ್ಲಿ ತೀವ್ರ ಪೈಪೋಟಿ, ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ, ಹಿಂದಿನ ಚುನಾವಣೆಗಳಲ್ಲಿ ಸಾಕಷ್ಟು ಮೋಸ, ದಗಲ್‌ಬಾಜಿ ಮಾಡಿದ್ದರು. ಆದರೆ, ಈ ಸಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಸುಲಭವಾಗಿ ಗೆಲುವು ಸಾಧಿಸಿದ್ದೇವೆ ಎಂದು ಮಲ್ಲಿಕಾರ್ಜುನ್‌ ಹರ್ಷ ವ್ಯಕ್ತಪಡಿಸಿದರು.

ಮಹಿಳೆಯರ ಸಹಕಾರ ಹೆಚ್ಚು:

ಚುನಾವಣೆಯಲ್ಲಿ ಮಹಿಳೆಯರು ಹೆಚ್ಚು ಸಹಕಾರ ನೀಡಿದ್ದಾರೆ. ಜಿಲ್ಲೆಯ ಕೆಲ ಕಡೆ ಕಡಿಮೆ ಮತದಾನವಾಗಿದ್ದು, ಅದರ ಬಗ್ಗೆ ಬೇಸರವೂ ಇದೆ. ಹಾಗೆಯೇ ಬೇರೆ ಕ್ಷೇತ್ರಗಳು ಉತ್ತಮ ಮುನ್ನಡೆ ನೀಡಿವೆ. ಡಾ.ಪ್ರಭಾ 26,094 ಮತಗಳ ಅಂತರದಿಂದ ಜಯಶಾಲಿಯಾಗಿದ್ದು, ಇದೇನೂ ಕಡಿಮೆ ಅಂತರವೇನೂ ಅಲ್ಲ ಎಂದು ಹೇಳಿದರು.

ಎಲ್ಲ ಜಾತಿ, ಧರ್ಮಗಳ ಮತದಾರರೂ ನಮ್ಮ ಕೈ ಹಿಡಿದಿದ್ದಾರೆ. ಜಿಲ್ಲೆಯಲ್ಲಿ ನಮ್ಮೆಲ್ಲಾ ಶಾಸಕರು, ಮಾಜಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ರಾಜ್ಯಮಟ್ಟದ ಫಲಿತಾಂಶದಲ್ಲಿ ಕಾಂಗ್ರೆಸ್ ಇನ್ನೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕಾಗಿತ್ತು. ಆದರೆ, ಕಡಿಮೆ ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದೇವೆ. ರಾಜ್ಯದ ಜನರ ತೀರ್ಮಾನವನ್ನು ನಾವು ಸ್ವೀಕರಿಸುತ್ತೇವೆ. ಆದರೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ಕೆಲಸ ಮಾಡಿವೆ. ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಉತ್ತಮವಾಗಿ ಕೆಲಸ ಮಾಡುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.

ದಾವಣಗೆರೆ ಪ್ರಥಮ ಮಹಿಳಾ ಸಂಸದೆಯಾಗಿ ಚುನಾಯಿತರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ. ಶಾಂತನಗೌಡ, ಕೆ.ಎಸ್‌.ಬಸವಂತಪ್ಪ, ಶಿವಗಂಗಾ ವಿ.ಬಸವರಾಜ, ಬಿ.ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ಮುದೇಗೌಡ್ರ ಗಿರೀಶ, ಶಿವಗಂಗಾ ವಿ.ಶ್ರೀನಿವಾಸ, ಕೆ.ಚಮನ್ ಸಾಬ್‌, ಅಯೂಬ್ ಪೈಲ್ವಾನ್, ಸಮರ್ಥ ಎಂ.ಶಾಮನೂರು, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಬಸವಾಪಟ್ಟಣ ನಾಗರಾಜ, ಬಿ.ಎಚ್.ವೀರಭದ್ರಪ್ಪ, ಎಸ್.ಮಲ್ಲಿಕಾರ್ಜುನ, ರಾಕೇಶ, ಹೊದಿಗೆರೆ ರಮೇಶ, ಶ್ರೀನಿವಾಸ ನಂದಿಗಾವಿ, ಬಿ.ಜಿ.ರಮೇಶ, ಶಂಭು ಉರೇಕೊಂಡಿ ಇತರರು ಇದ್ದರು.

- - -

-(ಫೋಟೋ ಬರಲಿವೆ).