ಸಿದ್ದೇಶ್ವರ ದೇವಳ ಕಳಸಾರೋಹಣ ಸಂಪನ್ನ

| Published : Nov 14 2025, 02:00 AM IST

ಸಾರಾಂಶ

ತಾಲೂಕಿನ ಹೊನ್ನಿಕೇರಿ ಗ್ರಾಮ ಎಂದರೆ ನೆನಪಾಗುವುದು ಸಿದ್ದೇಶ್ವರ ದೇವಸ್ಥಾನ. ಲಕ್ಷಾಂತರ ಭಕ್ತರನ್ನು ಸೆಳೆಯುವ ಈ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಬುಧವಾರ ಭಕ್ತಿ ಸಂಭ್ರಮದ ಮಧ್ಯೆ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ತಾಲೂಕಿನ ಹೊನ್ನಿಕೇರಿ ಗ್ರಾಮ ಎಂದರೆ ನೆನಪಾಗುವುದು ಸಿದ್ದೇಶ್ವರ ದೇವಸ್ಥಾನ. ಲಕ್ಷಾಂತರ ಭಕ್ತರನ್ನು ಸೆಳೆಯುವ ಈ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಬುಧವಾರ ಭಕ್ತಿ ಸಂಭ್ರಮದ ಮಧ್ಯೆ ಜರುಗಿತು.

ಎಲ್ಲೆಲ್ಲೂ ಜಯಘೋಷಗಳು, ಮಂತ್ರಘೋಷಗಳು ಮೊಳಗಿದವು. ಬೃಹತ್ ಕ್ರೇನ್ ಮೂಲಕ ಸುಮಾರು 30 ಕೆಜಿ ತೂಕದ ಪಂಚಲೋಹದ ಕಳಶ ದೇವಸ್ಥಾನದ ಮುಡಿಗೇರಿತು. ಈ ಸಂದರ್ಭದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳು ಮಾತನಾಡುತ್ತ, ಈ ಭಾಗದಲ್ಲಿ ರಂಭಾಪುರಿ ಪೀಠದ ಪರಂಪರೆಯ ಜಗದ್ಗುರು ರೇವಣಸಿದ್ದೇಶ್ವರರು ಸಂಚಾರ ಮಾಡಿ, ತಪಸ್ಸನ್ನು ಮಾಡಿ ಭಕ್ತರನ್ನು ಉದ್ಧಾರಗೈದಿದ್ದಾರೆ. ಹೊನ್ನಿಕೇರಿ ಪವಿತ್ರ ಸುಕ್ಷೇತ್ರವಾಗಲು ರೇವಣಸಿದ್ದೇಶ್ವರರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರೇವಣಸಿದ್ದೇಶ್ವರರ ಕೊಡುಗೆ ಅಗಾಧವಾಗಿದೆ. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಇಲ್ಲಿ ಒಂದು ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಲಿ ಎಂದು ಪೂಜ್ಯರು ಆದೇಶ ಮಾಡಿದರು.

ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಹೊನ್ನಿಕೇರಿ ಸೇರಿದಂತೆ ಸುತ್ತಮುತ್ತಲಿನ ಭಾಗದ ಭಕ್ತರು ತಮ್ಮ ಅಪಾರವಾದ ಕೊಡುಗೆಯೊಂದಿಗೆ ಉತ್ತಮ ದೇವಸ್ಥಾನ ನಿರ್ಮಾಣ ಮತ್ತು ಕಳಸಾರೋಹಣ ಮಾಡುತ್ತಿದ್ದಾರೆ. ಸುಮಾರು 200 ವರ್ಷಗಳ ಹಿಂದೆ ಮಂದಿರದ ಕಳಸಾರೋಹಣ ಮಾಡಲಾಗಿತ್ತು. ಮತ್ತೆ ಇದೀಗ ಕಳಸಾರೋಹಣ ಮಾಡುವ ಕ್ಷಣಗಳನ್ನು ನೋಡುತ್ತಿರುವ ನಮ್ಮ ಕಣ್ಣುಗಳು ಪಾವನವಾಗಿವೆ. ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರ ದಲ್ಲಿ ಬರುವ ಹೊನ್ನಿಕೇರಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಜಿಲ್ಲೆಯ ಲಕ್ಷಾಂತರ ಭಕ್ತರಿಗೆ ಸಿದ್ದೇಶ್ವರರು ಮನೆದೇವರಾಗಿದ್ದಾರೆ ಎಂದರು.

ಇದೇ ವೇಳೆ ವಿರೂಪಾಕ್ಷ ಶಿವಾಚಾರ್ಯರು ಹುಡಗಿ, ಶಿವಲಿಂಗೇಶ್ವರ ಶಿವಾಚಾರ್ಯರು ಹೆಡಗಾಪುರ, ದಾರುಕಾಲಿಂಗ ಶಿವಾಚಾರ್ಯರು, ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಲಬರ್ಗಾ, ಮಂದಿರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತಕುಮಾರ ಕುಲಕರ್ಣಿ, ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.