ಸಿದ್ಧಗಂಗೆ ಶಿವಕುಮಾರ ಶ್ರೀಗಳ ಹೆಸರು ಅಜರಾಮರ: ದೇಶಮುಖ

| Published : Apr 02 2024, 01:01 AM IST

ಸಾರಾಂಶ

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ರಾಜ್ಯದಲ್ಲಿ‌ ಅಕ್ಷರ ಕ್ರಾಂತಿಯನ್ನೇ ಮಾಡಿದ್ದಾರೆ. ಹೀಗಾಗಿ ಶ್ರೀಗಳು ನಾಡಿನಲ್ಲಿ ಅಜರಾಮರಾಗಿದ್ದಾರೆ

ಕಲಬುರಗಿ: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ರಾಜ್ಯದಲ್ಲಿ‌ ಅಕ್ಷರ ಕ್ರಾಂತಿಯನ್ನೇ ಮಾಡಿದ್ದಾರೆ. ಹೀಗಾಗಿ ಶ್ರೀಗಳು ನಾಡಿನಲ್ಲಿ ಅಜರಾಮರಾಗಿದ್ದಾರೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ 117ನೇ ಗುರುವಂದನಾ ಹಾಗೂ ಸಾಧಕರಿಗೆ‌ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಾಡದಂತ ಕೆಲಸಗಳು‌ ಮಠ ಮಂದಿರಗಳು ಮಾಡುತ್ತಿವೆ.

ಅನ್ನ ದಾಸೋಹದ‌ ಜೊತೆ ಜ್ಞಾನ ದಾಸೋಹ ಮಾಡುತ್ತಿವೆ. ಬಡ‌ಮಕ್ಕಳಿಗೆ ಉಚಿತ ಊಟ, ವಸತಿ ಜೊತೆಯಲ್ಲಿ‌ ಉಚಿತ ಶಿಕ್ಷಣ ನೀಡುವ ಮೂಲಕ‌ ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸಿದ್ಧಗಂಗಾ ಮಠದಲ್ಲಿ ಓದಿದವರು ಭಾಗ್ಯವಂತರು. ಅಲ್ಲಿ ಕೇವಲ ಜ್ಞಾನ ನೀಡುತ್ತಿಲ್ಲ ಸಂಸ್ಕಾರಯುತ ಶಿಕ್ಷಣ ಸಿಗುತ್ತದೆ. ಅಲ್ಲಿ ಓದಿದ ವಿದ್ಯಾರ್ಥಿಗಳು ಸಂಸ್ಕಾರವನ್ನು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅಧ್ಯಕ್ಷತೆವಹಿಸಿ ಮಾತನಾಡುತ್ತ ಸಿದ್ಧಗಂಗಾ ಶ್ರೀಗಳು ಬಡ ಮಕ್ಕಳಿಗೆ ತಂದೆ-ತಾಯಿಯಾಗಿ ನಿಂತು ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ ಎಂದರು.

ಪತ್ರಕರ್ತ ಬಾಬುರಾವ ಯಡ್ರಾಮಿ, ಕಲ್ಯಾಣರಾವ ಪಾಟೀಲ್ ಮಳಖೇಡ, ಶ್ರೀಶೈಲ ಘೂಳಿಯವರು ಉಪಸ್ಥಿತರಿದ್ದರು. ದೇವೇಂದ್ರಪ್ಪ ಅವಂಟಿಯವರು ಮೊದಲಿಗೆ ಸ್ವಾಗತಿಸಿ, ವಂದಿಸಿದರು.

ಪ್ರಗತಪರ ಕೃಷಿಕ ಮಹಿಳೆ ಗುರುಬಾಯಿ ಆಳಂದ ಅವರಿಗೆ ಸಿದ್ಧಗಂಗಾ ಶ್ರೀ ಪ್ರಶಸ್ತಿ ಹಾಗೂ ಶಿಕ್ಷಕ ಡಿ.ಎನ್.ಪಾಟೀಲ್ ಅವರಿಗೆ ಡಾ. ಶಿವಕುಮಾರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರ,ಸಹನಾ ವೆಂಕಟೇಶ್ವರ ಮೂರ್ತಿ, ತಾಜೋದ್ದೀನ್ ಆಜಾದ, ವಿಜಯಕುಮಾರ ವಾರದ ಅವರನ್ನು ಸನ್ಮಾನಿಸಲಾಯಿತು. ನಗರದ ನಂದಗೋಕುಲ ವಿದ್ಯಾರ್ಥಿಗಳಿಗೆ 5117 ರು. ದೇಣಿಗೆ ನೀಡಿ, ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭ ಮುಗಿದ ನಂತರ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.