ಸಾರಾಂಶ
ನಡೆ ನುಡಿಯಲ್ಲಿ, ಯಾವುದೇ ಭೇದ ಭಾವಗಳನ್ನು ತೋರದೆ ಶ್ರೀಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾವೇರಿ
ತ್ರಿವಿಧ ದಾಸೋಹಿ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಡೆ ನುಡಿಯಲ್ಲಿ, ಯಾವುದೇ ಭೇದ ಭಾವಗಳನ್ನು ತೋರದೆ ಶ್ರೀಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಹೇಳಿದರು.ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಲಿಂ.ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೭೫ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೋಂಟದಾರ್ಯ ಶ್ರೀಮಠದ ಶಿವಾನುಭವ ವೇದಿಕೆ ಸರ್ವಜನಾಂಗದ ವೇದಿಕೆಯಾಗಿದೆ. ಈ ವೇದಿಕೆಯಲ್ಲಿ ಪ್ರತಿ ಸೋಮವಾರ ಶಿವಾನುಭವಗಳು ಸರ್ವ ಧರ್ಮಗಳ ಸಂದೇಶವನ್ನು ಭಕ್ತರಿಗೆ ನೀಡುವಂತೆ ಮಾಡಿದ ಶ್ರೇಯಸ್ಸು ಪೂಜ್ಯರಿಗೆ ಸಲ್ಲುತ್ತದೆ. ತಮ್ಮ ೪೪ ವರ್ಷಗಳ ಬದುಕಿನುದ್ದಕ್ಕೂ ಸಮಾನತೆಯ ಹರಿಕಾರರಾಗಿ ಭಾವೈಕ್ಯತೆಯ ಸಾರವನ್ನು ಎಲ್ಲರಿಗೂ ಉಣಬಡಿಸಿದ್ದಾರೆ. ಅಂತಹ ಪೂಜ್ಯರ ಕಾಲಘಟ್ಟದಲ್ಲಿ ನಾವಿರುವುದು ನಮ್ಮ ಸೌಭಾಗ್ಯ ಮತ್ತು ಪೂಜ್ಯರ ಭಕ್ತಾಧಿಗಳು ಭಾವೈಕ್ಯತಾ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ತ್ರಿವಿಧ ದಾಸೋಹಿ:ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಎಲ್ಲಾ ಸಮಾಜದವರೆಗೆ ಮಠದ ದ್ವಾರಬಾಗಿಲನ್ನು ತೆರೆದಿಟ್ಟು ಮೇಲು ಕೀಳುಗಳನ್ನು ಮನಸಿನಾಳದಿಂದ ಕಿತ್ತೆಸೆದು ಹಾಕಿದ್ದರು. ಭಾವಕೈತೆಯ ಸಾರವನ್ನು ಎಲ್ಲಾ ಜನಾಂಗದವರೆಗೆ ಮನನ ಮಾಡಿಕೊಟ್ಟರು. ಸಮಾಜಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ಮತ್ತು ಪುಸ್ತಕ ದಾಸೋಹವನ್ನು ಮಾಡಿ ತ್ರಿವಿಧ ದಾಸೋಹಿ ಎಂದೆನಿಸಿಕೊಂಡರು. ಅವರ ಮಾರ್ಗದಲ್ಲಿ ನಾವೆಲ್ಲ ನಡೆದರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹಾವೇರಿಯ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಚ್.ಕೆ. ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಸಿ.ಎನ್. ಗೌಡರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಪವನಕುಮಾರ ಬಡಿಗೇರ ಮತ್ತು ಸಂಗಡಿಗರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಡಾ. ಕಲ್ಲನಗೌಡರ ಅಜ್ಜಪ್ಪಗೌಡರ ಸ್ವಾಗತಿಸಿದರು. ಡಾ. ಸಂಗಮೇಶ್ವರ ದೊಡ್ಡಗೌಡರ ನಿರೂಪಿಸಿದರು. ಡಾ. ದಯಾನಂದ ಸುತ್ತಕೊಟಿ ವಂದಿಸಿದರು.