ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಅಂತರಂಗ-ಬಹಿರಂಗಗಳನ್ನು ಅವಲೋಕಿಸಲು ದಟ್ಟವಾದ ಅನುಭಾವ ಸಿದ್ಧಾಂತದ ನಿಜ ಅರಿವನ್ನು ತುಂಬಿ ಮನುಕುಲಕ್ಕೆ ಶ್ರೇಷ್ಠ ಜೀವನ ವಿಧಾನ ಬೋಧಿಸಿದ ಶಿವಕಾವ್ಯವೇ ಸಿದ್ಧಾಂತ ಶಿಖಾಮಣಿ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಶಿವಕುಮಾರಸ್ವಾಮಿ ಹೇಳಿದರು.ಸಿಂದಗಿಯ ಸಾರಂಗಮಠದ ಲಿಂ. ಚನ್ನವೀರ ಮಹಾಸ್ವಾಮಿಗಳ 131ನೇ ಜಯಂತ್ಯುತ್ಸವದ ನಿಮಿತ್ತ ಚನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ನೀಡುವ ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರಗಳು ಮಾಡಬೇಕಾಗಿರುವ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಅದರಲ್ಲಿ ಸಿಂದಗಿಯ ಸಾರಂಗಮಠ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಶಿಕ್ಷಣ ಅನ್ನದಾಸೋಹ, ಸಂಸ್ಕಾರ, ಜ್ಞಾನ ನೀಡುತ್ತಿರುವುದು ಈ ಭಾಗದ ಜನತೆಯ ಪುಣ್ಯದ ಫಲ. ಹಿಂದಿನ ಕಾಲದ ರಾಜಾಶ್ರಯ ಪದ್ಧತಿಯಲ್ಲಿ ಅನೇಕ ಕವಿಗಳು, ಸಾಧಕರು ಪ್ರಚಾರಕ್ಕೆ ಬಂದರು. ಈಗ ಅದು ಹೋದ ಮೇಲೆ ಮಠಗಳು ಆ ಕಾರ್ಯವನ್ನು ಮಾಡುತ್ತಿವೆ ಎಂದರು.
ಇಂಡಿ ತಾಲೂಕಿನ ಸಾಲೋಟಗಿಯ ಶ್ರೀ ಶಿವಯೋಗಿ ಶಿವಾಚಾರ್ಯರು 8 ರಿಂದ 10ನೇ ಶತಮಾನದ ಅವಧಿಯಲ್ಲಿ ವೀರಶೈವ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರಚಿಸಿ ಧರ್ಮ ಮಾರ್ಗ ಪ್ರವರ್ತಕರಾಗಿದ್ದವರು. ಸಿದ್ಧಾಂತ ಶಿಖಾಮಣಿ ಕುರಿತಾಗಿ ಈ ನಾಡಿನಲ್ಲಿ ಅನೇಕ ವಾದ ವಿವಾದಗಳು ನಡೆಯುತ್ತಿವೆ. ಅವರಿಗೆ ನಾವು ಸೂಕ್ತ ಉತ್ತರವನ್ನು ದಾಖಲೆ ಸಮೇತ ನೀಡಿದ್ದೇವೆ. ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಶಿವ ದೀಕ್ಷೆ, ಸಮಾನತೆ ಸಂಸ್ಕಾರ ನೀಡಿದ ಜಗತ್ತಿನ ಏಕೈಕ ಧರ್ಮ ವೀರಶೈವ ಧರ್ಮ. ವೀರಶೈವ ಧರ್ಮದ ನೆಲೆಯಿಂದ ಬಂದ ಸಿದ್ಧಾಂತ ಶಿಖಾಮಣಿಯನ್ನು ಶಿವಾದೈವ ಸಿದ್ದಾಂತ ಎಂದು ಕರೆಯಲಾಗುತ್ತದೆ. ಮಾನವನು ಮಹಾದೇವನಾಗಲು ಇರುವ ಎಲ್ಲ ಕಲ್ಪನೆಗಳು ಸಿದ್ಧಾಂತ ಶಿಖಾಮಣಿಯಲ್ಲಿ ಅಡಗಿವೆ ಎಂದು ವಿವರಿಸಿದರು.ಶಿವಯೋಗಿ ಶಿವಾಚಾರ್ಯರ ಹೆಸರಿನ ಮೇಲೆ ಸಾರಂಗಮಠ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ರಾಜ್ಯ ಸರ್ಕಾರದ ಆದೇಶದನ್ವಯ ಶ್ರೀ ಚನ್ನವೀರ ಸ್ವಾಮೀಜಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಬಸ್ ನಿಲ್ದಾಣಕ್ಕೆ ತಮ್ಮ ಅತ್ಯಂತ ಮೌಲ್ಯದ ಭೂಮಿಯನ್ನ ದಾನವಾಗಿ ಸರ್ಕಾರಕ್ಕೆ ನೀಡಿದ ಲಿಂ.ಕಾಯಕವೇ ಚನ್ನವೀರ ಶ್ರೀಗಳ ಕಾರ್ಯ ಅತ್ಯಂತ ಸೃಜನಾತ್ಮಕವಾಗಿದೆ. ಆ ದಿಶೆಯಲ್ಲಿ ಸಿಂದಗಿ ಮಹಾಜನತೆಯ ಬಹುದಿನಗಳ ಬೇಡಿಕೆ ಬಸ್ ನಿಲ್ದಾಣಕ್ಕೆ ಚನ್ನವೀರ ಶ್ರೀಗಳ ಹೆಸರು ನಾಮಕರಣ ಮಾಡಬೇಕು ಎಂಬುದು ಬೇಡಿಕೆಯಾಗಿತ್ತು. ಅದು ಇಂದು ಯಶಸ್ವಿಗೊಂಡಿದೆ. ಈ ಕಾರ್ಯ ನನ್ನ ಅವಧಿಯಲ್ಲಿಯೇ ಆದ ಮಹತ್ಕಾರ್ಯ ಎಂದು ಬಣ್ಣಿಸಿದರು.
ಈ ವೇಳೆ ಶ್ರೀ ಶಿವಯೋಗಿ ಶಿವಾಚಾರ್ಯ ಪ್ರಶಸ್ತಿಯನ್ನು ಉಜ್ಜಯಿನಿ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಡಾ.ಸಿ.ಶಿವಕುಮಾರಸ್ವಾಮಿ ಅವರಿಗೆ ನೀಡಿ ಗೌರವಿಸಿದರು.ಅಧ್ಯಕ್ಷತೆ ವಹಿಸಿದ್ದ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿದರು. ವೇದಿಕೆಯ ಮೇಲೆ ಶಹಪೂರಿನ ಸುಗುರೇಶ್ವರ ಶ್ರೀಗಳು, ಕೊಣ್ಣೂರು ಹೊರಗಿನ ಕಲ್ಯಾಣ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶ್ರೀ, ಊರಿನ ಹಿರೇಮಠದ ಶ್ರೀ ಶಿವಾನಂದ ಶ್ರೀಗಳು ಸೇರಿದಂತೆ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು. ಡಾ ರವಿ ಗೋಲಾ ಮತ್ತು ಪೂಜಾ ಹಿರೇಮಠ ನಿರೂಪಿಸಿದರು, ಸ್ವಾಗತಿಸಿದರು.
-----------ಕೋಟ್......
ಸಿದ್ಧಾಂತ ಶಿಖಾಮಣಿ ಗ್ರಂಥ ಸಮಸ್ತ ಮನುಕುಲಕ್ಕೆ ಉಪದೇಶ ನೀಡುವ ಗ್ರಂಥವಾಗಿದೆ. ಇದನ್ನು ವೀರಶೈವರು ಧರ್ಮಗ್ರಂಥ ಎಂದು ಕರೆದಿದ್ದರೂ ಅದು ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜಗತ್ತಿನ ಎಲ್ಲ ಧರ್ಮದವರೂ ಇದನ್ನು ಓದುವುದರಿಂದ ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ.- ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ, ಉಜ್ಜಯಿನಿ ಪೀಠ