೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಅನುಭವ ಮಂಟಪದ ಆಶಯಗಳು ಹಾಗೂ ಶರಣರ ವಚನಗಳಲ್ಲಿನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸಿದ್ಧರಾಮೇಶ್ವರರ ಜೀವನ, ಸಾಧನೆ ಮತ್ತು ತತ್ವಾದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಜಯಂತಿಯ ಮುಖ್ಯ ಉದ್ದೇಶವಾಗಬೇಕು. ಇದು ಕೇವಲ ಒಂದು ಸಮುದಾಯದ ಕಾರ್ಯಕ್ರಮವಾಗದೆ ಸರ್ವ ಸಮಾಜದ ಸಾಂಸ್ಕೃತಿಕ ಉತ್ಸವವಾಗಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಬಸವಾದಿ ಶರಣರ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಹಾಸನದಲ್ಲಿ ಜನವರಿ ೧೪ ಮತ್ತು ೧೫ರಂದು ನಡೆಯಲಿರುವ 854ನೇ ಶ್ರೀ ಸಿದ್ಧರಾಮೇಶ್ವರ ಜಯಂತಿ ಮಹೋತ್ಸವವನ್ನು ರಾಜ್ಯಕ್ಕೇ ಮಾದರಿಯಾಗುವಂತೆ ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಕರೆ ನೀಡಿದರು.ನಗರದ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ಬುಧವಾರ ನಡೆದ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು ೪೮ ವರ್ಷಗಳ ಬಳಿಕ ಹಾಸನ ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಈ ಮಹೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಎಲ್ಲ ಸಮಾಜದ ಮುಖಂಡರು, ಮಠಾಧೀಶರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಅದ್ಧೂರಿಯಾಗಿ ಆಚರಿಸಬೇಕು ಎಂದರು. ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಅನುಭವ ಮಂಟಪದ ಆಶಯಗಳು ಹಾಗೂ ಶರಣರ ವಚನಗಳಲ್ಲಿನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸಿದ್ಧರಾಮೇಶ್ವರರ ಜೀವನ, ಸಾಧನೆ ಮತ್ತು ತತ್ವಾದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಜಯಂತಿಯ ಮುಖ್ಯ ಉದ್ದೇಶವಾಗಬೇಕು. ಇದು ಕೇವಲ ಒಂದು ಸಮುದಾಯದ ಕಾರ್ಯಕ್ರಮವಾಗದೆ ಸರ್ವ ಸಮಾಜದ ಸಾಂಸ್ಕೃತಿಕ ಉತ್ಸವವಾಗಬೇಕು ಎಂದು ಹೇಳಿದರು.
ಹಾಸನಾಂಬೆ ಉತ್ಸವವನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಿದ ಅನುಭವ ನಮ್ಮ ಮುಂದಿದೆ. ಅದೇ ಒಗ್ಗಟ್ಟಿನಿಂದ ಸಿದ್ಧರಾಮೇಶ್ವರ ಜಯಂತಿಯನ್ನೂ ಯಶಸ್ವಿಗೊಳಿಸಬೇಕು. ಕನಿಷ್ಠ ನೂರು ಜನರ ಸಮರ್ಪಿತ ಕಾರ್ಯಕರ್ತರ ತಂಡ ರಚಿಸಿ, ಪ್ರತಿಯೊಬ್ಬರಿಗೂ ಪ್ರತ್ಯೇಕ ಜವಾಬ್ದಾರಿ ವಹಿಸಬೇಕು. ಸಂಸದರು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲಿದ್ದಾರೆ. ವೇದಿಕೆ, ಪೆಂಡಾಲ್, ಮೆರವಣಿಗೆ, ದೀಪಾಲಂಕಾರ ಹಾಗೂ ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ವ್ಯವಸ್ಥೆಗಳಿಗೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಹಣಕಾಸು ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಸಂಗ್ರಹವಾದ ದೇಣಿಗೆ, ದಾನಿಗಳ ವಿವರ ಹಾಗೂ ಖರ್ಚು-ವೆಚ್ಚಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮೊದಲು ಸಂಪೂರ್ಣ ಆಯವ್ಯಯ ಪಟ್ಟಿ ಸಿದ್ಧಪಡಿಸಿ, ಅದರಂತೆ ಹಣ ಸಂಗ್ರಹ ಮತ್ತು ವೆಚ್ಚ ಮಾಡಬೇಕು. ಸಾರ್ವಜನಿಕರ ಹಣದ ಬಳಕೆಯಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂದು ಸೂಚಿಸಿದರು. ಜಯಂತಿ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಾಗಬಾರದು. ಎಲ್ಲ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಭಾಗವಹಿಸಬೇಕು. ವೇದಿಕೆಯಲ್ಲಿ ರಾಜಕೀಯ ವಿಚಾರಗಳಿಗೆ ಅವಕಾಶ ನೀಡದೆ ಸಿದ್ಧರಾಮೇಶ್ವರರು ಹಾಗೂ ಬಸವಾದಿ ಶರಣರ ಜೀವನ ಸಂದೇಶಗಳ ಬಗ್ಗೆ ಮಾತ್ರ ವಿಚಾರ ಮಂಡನೆಯಾಗಬೇಕು. ಬಸವಣ್ಣನವರ ವಚನಗಳು ಭಾಷಣಕ್ಕೆ ಸೀಮಿತವಾಗದೆ ದೈನಂದಿನ ಬದುಕಿನಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಸಿದ್ಧರಾಮೇಶ್ವರ ಜಯಂತಿ ಮಹೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜನಪ್ರತಿನಿಧಿಗಳು, ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಜವಾಬ್ದಾರಿ ನಿರ್ವಹಿಸಿದರೆ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಾಧ್ಯ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಇಡೀ ರಾಜ್ಯವೇ ಗಮನಿಸುವಂತೆ ರೂಪಿಸಬೇಕು ಎಂದರು. ಕಾರ್ಯಕ್ರಮದ ಯಶಸ್ಸು ಒಬ್ಬರಿಂದ ಸಾಧ್ಯವಿಲ್ಲ. ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಉದ್ದೇಶ ಈಡೇರಲು ಸಾಧ್ಯ. ನಮಗೆ ವಹಿಸಿರುವ ಜವಾಬ್ದಾರಿಯನ್ನು ಯಾವುದೇ ಲೋಪವಿಲ್ಲದೆ ನಿರ್ವಹಿಸಬೇಕು ಎಂದರು. ಸಭೆಯ ಆರಂಭದಲ್ಲಿ ಜನಾಂಗದ ಮುಖಂಡರೊಬ್ಬರ ನಿಧನದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಭೆಯಲ್ಲಿ ಮಠದ ಮಠಾಧೀಶರಾದ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ಕೆ.ಎನ್. ಲಿಂಗೇಶ್, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮೇಗೌಡ, ಸಮಾಜ ಮುಖಂಡರಾದ ಬಿ.ಎ. ಜಗನ್ನಾಥ್, ಯಲಗುಂದ ಈಶ್ವರಪ್ಪ, ಲಲಾಟ್ ಮೂರ್ತಿ, ರೇವಣ್ಣಯ್ಯ, ಸಂಗಂ, ಯು.ಎಸ್. ಬಸವರಾಜು, ನವಿಲೇ ಪರಮೇಶ್, ಪುನಿತ್ ಪಟೇಲ್, ಕಟ್ಟಾಯಶಿವಕುಮಾರ್, ಗಂಗೂರು ಶಿವಕುಮಾರ್, ಜಾವಗಲ್ ಮಂಜುನಾಥ್, ಮಮತಾ ಪಾಟೀಲ್, ರಾಂಪುರ ರಾಜಶೇಖರ್, ದೇಶಾಣಿ ಆನಂದ್, ಚಂದ್ರಶೇಖರ್, ಉಮೇಶ್ ಕಾಟೀಕೆರೆ, ಮಹದೇವಪ್ಪ ಇತರರು ಉಪಸ್ಥಿತರಿದ್ದರು.