ಸಾರಾಂಶ
ಉತ್ಸವ ಮೂರ್ತಿಗಳು 6 ಟ್ರ್ಯಾಕ್ಟರ್ಗಳಲ್ಲಿ ಶುಕ್ರವಾರದಿಂದ ಧಾರವಾಡ ಜಿಲ್ಲೆಯ 62 ಪ್ರಮುಖ ಗ್ರಾಮಗಳಲ್ಲಿ 24 ದಿನ ಸಂಚರಿಸಲಿವೆ.
ಹುಬ್ಬಳ್ಳಿ:
ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ಶ್ರೀಸಿದ್ಧಾರೂಢ ಸ್ವಾಮೀಜಿ ಸೇರಿದಂತೆ ಅವರ ಸಮಕಾಲೀನ ಮಹಾತ್ಮರ ಆರು ಉತ್ಸವ ಮೂರ್ತಿಗಳ ಹಾಗೂ ಅಂಬಾರಿ ಮಂಟಪಗಳ ಸಂಗಮ ರಥಯಾತ್ರೆಗೆ ಶುಕ್ರವಾರ ಚಾಲನೆ ನೀಡಲಾಯಿತು. 24 ದಿನ 62 ಗ್ರಾಮಗಳಲ್ಲಿ ಈ ರಥಯಾತ್ರೆ ಸಂಚರಿಸಲಿದೆ.ಶ್ರೀಸಿದ್ಧಾರೂಢ ಅವರ ಸಮಕಾಲಿನ ಮಹಾತ್ಮರಾದ ಗರಗದ ಮಡಿವಾಳೇಶ್ವರ ಸ್ವಾಮೀಜಿ, ನವಲಗುಂದ ನಾಗಲಿಂಗ ಸ್ವಾಮೀಜಿ, ಉಣಕಲ್ನ ಶ್ರೀ ಸಿದ್ದಪ್ಪಜ್ಜ ಸ್ವಾಮೀಜಿ, ಶಿಶುನಾಳದ ಸಂತು ಶರೀಫ ಶಿವಯೋಗಿ ಸ್ವಾಮೀಜಿ, ಹುಬ್ಬಳ್ಳಿ ಗುರುನಾಥರೂಢ ಸ್ವಾಮೀಜಿ ಹಾಗೂ ಶ್ರೀಸಿದ್ಧಾರೂಢ ಸ್ವಾಮೀಜಿಗಳ ಅಂಬಾರಿ ಮಂಟಪಗಳನ್ನು ಅಲಂಕಾರಿಸಿದ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ನಡೆಸಲಾಯಿತು.
ಜಗದ್ಗುರು ಶ್ರೀಸಿದ್ಧಾರೂಢರ ಹಾಗೂ ಸಮಕಾಲಿನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ಧಾರವಾಡ ಜಿಲ್ಲೆಯ 62 ಗ್ರಾಮಗಳ ಭಕ್ತರು ಸೇರಿ ಈ ಆರು ಜನ ಮಹಾತ್ಮರ ಉತ್ಸವ ಮೂರ್ತಿಗಳನ್ನು ಮಾಡಿಸಿದ್ದಾರೆ. ಈ ಮೂರ್ತಿಗಳು 6 ಟ್ರ್ಯಾಕ್ಟರ್ಗಳಲ್ಲಿ ಶುಕ್ರವಾರದಿಂದ ಧಾರವಾಡ ಜಿಲ್ಲೆಯ 62 ಪ್ರಮುಖ ಗ್ರಾಮಗಳಲ್ಲಿ 24 ದಿನ ಸಂಚರಿಸಲಿವೆ.ಸಂಗಮ ರಥಯಾತ್ರೆಗೆ ಚಾಲನೆ ನೀಡಿದ ಬೀದರನ ಶ್ರೀಚಿದಂಬರಾಶ್ರಮ ಶ್ರೀಸಿದ್ಧಾರೂಢಮಠದ ಡಾ. ಶಿವಕುಮಾರ ಸ್ವಾಮೀಜಿ, ಜಗತ್ತು ಕಲುಷಿತಗೊಂಡರೆ ಪರಮಾತ್ಮ ಹೊಸರೂಪ ತಾಳಿ, ಕಲ್ಮಶ ಹೋಗಲಾಡಿಸುತ್ತಾನೆ. ಜಗತ್ತಿನ ಕಲ್ಯಾಣಕ್ಕಾಗಿ ಪರಮಾತ್ಮ ಮಹಾತ್ಮರ ರೂಪದಲ್ಲಿ ಬರುತ್ತಾನೆ. ದೇಶ-ವಿದೇಶದಲ್ಲೂ ಸಿದ್ಧಾರೂಢ ಶ್ರೀಗಳ ಭಕ್ತರು ಇದ್ದಾರೆ. ಸಿದ್ಧಾರೂಢರು ಭಕ್ತರನ್ನು ಉದ್ಧಾರ ಮಾಡುವ ಸ್ವಾಮೀಜಿ. ಭಕ್ತರು ದೇವರಲ್ಲಿ ವರ ಕೇಳುವ ಬದಲು, ಪರಮಾತ್ಮನಿಗೆ ಶರಣಾಗಬೇಕು. ಮನಸ್ಸಿನಲ್ಲಿಯೇ ಮಠ ಕಟ್ಟಬೇಕು ಎಂದರು.ಚಳಕಾಪುರದ ಶ್ರೀಶಿವಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಭಾವದಂತೆ ದೇವರು ಕಾಣುತ್ತಾನೆ. ಶ್ರೀಸಿದ್ಧಾರೂಢರು ಬೇಡಿದವರಿಗೆ ಅಗತ್ಯ ವರ ನೀಡುವ ಕಲ್ಪವೃಕ್ಷ. ಶ್ರೀಮಠದಲ್ಲಿ ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹ ನಡೆಯುತ್ತಿದೆ ಎಂದು ತಿಳಿಸಿದರು.ಸೇವಾ ಟ್ರಸ್ಟ್ ಕಮಿಟಿ ಸಂಸ್ಥಾಪಕ ಮನೋಜ ಗದಗಿನ, ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಮಾಜಿ ಅಧ್ಯಕ್ಷ ಡಿ.ಡಿ. ಮಾಳಗಿ, ಬಿಜೆಪಿ ಮುಖಂಡ ರಂಗಾ ಬದ್ದಿ ಸೇರಿದಂತೆ ಇತರರು ಮಾತನಾಡಿದರು.
ಈ ವೇಳೆ ಇಂಚಲದ ಶ್ರೀಶಿವಾನಂದ ಭಾರತಿ ಸ್ವಾಮೀಜಿ, ಬದಾಮಿ ತಾಲೂಕು ಹೆಬ್ಬಳ್ಳಿಯ ಶ್ರೀಗುರು ಶಾಬುದ್ದೀನಶಾಯಿ ಅಜ್ಜನವರು, ಬಮ್ಮಿಗಟ್ಟಿಯ ಶ್ರೀದಯಾನಂದ ಸ್ವಾಮೀಜಿ, ತಾವರಗೇರಿಯ ಶ್ರೀನಿಗುರ್ಣಾನಂದ ಸ್ವಾಮೀಜಿ, ವರ್ಷಾ ಗದಗಿನ, ಅನಿಲಕುಮಾರ ಪಾಟೀಲ, ಡಾ. ಗೋವಿಂದ ಮಣ್ಣೂರ ಸೇರಿದಂತೆ ಇತರರು ಇದ್ದರು.