ವಿದೇಶದಲ್ಲೂ ಸಿದ್ಧಾರೂಢರ ಲೀಲೆ

| Published : Mar 01 2025, 01:05 AM IST

ಸಾರಾಂಶ

ಬೇರೆ ಬೇರೆ ದೇಶಗಳ ನಿವಾಸಿಗಳು ಬೇರೆ ಬೇರೆ ಮೂಲಗಳಿಂದ ಅಜ್ಜನ ಬಗ್ಗೆ ತಿಳಿದುಕೊಂಡು ಮಠ ವೀಕ್ಷಿಸಲೆಂದೇ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಆರಾಧ್ಯ ದೈವ ಶ್ರೀ ಸಿದ್ಧಾರೂಢರ ಖ್ಯಾತಿ ಇದೀಗ ವಿದೇಶಗಳಿಗೂ ಹಬ್ಬಿದೆ. ವಿದೇಶಗಳಿಂದಲೂ ಮಠಕ್ಕೆ ಅಜ್ಜನ ಭಕ್ತರು ಆಗಮಿಸುತ್ತಿದ್ದು, ಪಂಚಾಕ್ಷರಿ ಮಂತ್ರ (ಓಂ ನಮಃ ಶಿವಾಯ) ಜಪಿಸುತ್ತಾರೆ.

ಅದ್ವೈತ ಸಿದ್ಧಾಂತದಿಂದಲೇ ಜನರಿಗೆ ಸರಿದಾರಿ ತೋರಿಸಿ ಭಕ್ತರ ಪಾಲಿನ ಕಾಮಧೇನುವಾಗಿರುವವರು ಶ್ರೀ ಸಿದ್ಧಾರೂಢರು. ಉತ್ತರ ಕರ್ನಾಟಕದ ಜನತೆಗೆ ಆರೂಢರೆಂದರೆ ಅಪ್ರತಿಮ ಪ್ರೇಮ, ಭಕ್ತಿ. ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಭಕ್ತರು ಇರುವುದು ಗೊತ್ತು.

ಇನ್ನು ಸ್ಯಾಂಡಲ್‌ವುಡ್‌ನ ಡಾ. ರಾಜ್‌ ಅವರ ಕುಟುಂಬದ ಎಲ್ಲರೂ ಆಗಾಗ ಬರುತ್ತಿರುತ್ತಾರೆ. ಇತ್ತೀಚಿಗೆ ಚಿತ್ರನಟ ರಾಘವೇಂದ್ರ ರಾಜಕುಮಾರ ಅವರು ಪುತ್ರ ವಿನಯ್‌ ರಾಜಕುಮಾರ ಕೂಡ ಬಂದು ಹೋಗಿರುವುದುಂಟು. ಇದೇ ರೀತಿ ಇತರೆ ನಟರು ಆಗಾಗ ಬಂದು ಅಜ್ಜನ ಆಶೀರ್ವಾದ ಪಡೆದುಕೊಂಡು ಹೋಗುವುದುಂಟು.

ಬಾಲಿವುಡ್‌ನ ಹಿರಿಯ ನಟಿ ತನುಜಾ ಅವರಂತೂ ಆಗಾಗ ಆಗಮಿಸುತ್ತಿರುತ್ತಾರೆ. ನಟಿ ಕಾಜೋಲ್‌, ಚಿತ್ರನಟ ಅಜಯ್‌ ದೇವಗನ್‌ ಸೇರಿದಂತೆ ಹಲವು ನಟ-ನಟಿಯರೂ ಬಂದು ಹೋಗಿರುವುದುಂಟು.

ವಿದೇಶಗಳಲ್ಲೂ ಭಕ್ತರು

ಇದಲ್ಲದೇ ಅಜ್ಜನ ಭಕ್ತರು, ವಿದೇಶಗಳಲ್ಲೂ ನೆಲೆಸಿರುವುದುಂಟು. ಕರ್ನಾಟಕದಿಂದ ಬೇರೆ ಬೇರೆ ದೇಶಗಳಲ್ಲಿ ಹೋಗಿ ನೆಲೆಸಿರುವವರು ಭಕ್ತರಿದ್ದಾರೆ. ಇದು ಸಹಜ ಕೂಡ. ಏಕೆಂದರೆ ಅವರಿಗೆ ಅಜ್ಜನ ಬಗ್ಗೆ ಗೊತ್ತಿರುತ್ತದೆ. ಅವರು ಅಜ್ಜನ ಭಕ್ತರಾಗುವುದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ, ಬೇರೆ ಬೇರೆ ದೇಶಗಳ ನಿವಾಸಿಗಳು ಬೇರೆ ಬೇರೆ ಮೂಲಗಳಿಂದ ಅಜ್ಜನ ಬಗ್ಗೆ ತಿಳಿದುಕೊಂಡು ಮಠ ವೀಕ್ಷಿಸಲೆಂದೇ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ವಿಶೇಷವಾಗಿದೆ.

ಚೀನಾ, ಜಪಾನ್, ಯುಎಸ್‌ಎ, ಯುನೈಟೆಡ್‌ ಕಿಂಗಡಂ, ಯುರೋಪಿನ ಕ್ರೊಯೇಷಿಯಾ ಸೇರಿದಂತೆ ಹಲವು ದೇಶಗಳಿಂದ ಭಕ್ತರು ಧ್ಯಾನ, ಆಧ್ಯಾತ್ಮಿಕ ಚಿಂತನೆಗಾಗಿ ಅಜ್ಜನ ಮಠಕ್ಕೆ ಆಗಾಗ ಬರುತ್ತಲೇ ಇರುತ್ತಾರೆ. ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಇಲ್ಲಿಗೆ ಆಗಮಿಸಿ ಮಠದಲ್ಲಿ ಉಳಿದು ಪಂಚಾಕ್ಷರಿ ಮಂತ್ರವನ್ನು ಕೆಲ ಗಂಟೆಗಳ ಕಾಲ ಜಪ ಮಾಡಿ ತೆರಳುತ್ತಿರುವುದು ವಿಶೇಷ.

ಹೇಗೆ ಪರಿಚಯ:

ವಿದೇಶಿಗರಿಗೆ ಹುಬ್ಬಳ್ಳಿಯ ಆರೂಢರ ಬಗ್ಗೆ ಹೇಗೆ ಗೊತ್ತಾಗುತ್ತಿದೆ? ಅವರು ಅದ್ಹೇಗೆ ಹುಡುಕಿಕೊಂಡು ಬಂದು ಅಜ್ಜನ ದರ್ಶನ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಇಲ್ಲಿನವರು ಅಲ್ಲಿ ಹೋಗಿ ನೆಲೆಸಿದವರು ಅಜ್ಜನ ಬಗ್ಗೆ ತಿಳಿಸಿದರೆ, ಮತ್ತೆ ಕೆಲ ವಿದೇಶಿಗರು ಇಲ್ಲಿನ ಯೋಗ, ಧ್ಯಾನ ಕಲಿಯಲು ಬಂದು ಸ್ವಾಮೀಜಿಗಳು, ಆಧ್ಯಾತ್ಮಿಕ ಸಾಧಕರಿಂದ ಅಜ್ಜನ ಬಗ್ಗೆ ತಿಳಿದುಕೊಂಡು ಮಠಕ್ಕೆ ಬರುತ್ತಿದ್ದಾರೆ. ಕೆಲವರಂತೂ ಒಮ್ಮೆ ಬಂದು ಹೋದ ಮೇಲೆ ಮಠಕ್ಕಾಗಿಯೇ ವರ್ಷಕ್ಕೊಮ್ಮೆ, ಅಥವಾ ಆರು ತಿಂಗಳಿಗೊಮ್ಮೆ ಆಗಮಿಸುತ್ತಾರೆ. ಜತೆಗೆ ಬೇರೆ ವಿದೇಶಿಗರನ್ನೂ ಕರೆದುಕೊಂಡು ಬಂದು ಇಲ್ಲಿ ಜಪ ಮಾಡುತ್ತಾರೆ ಎಂದು ಮಠದ ಆಡಳಿತ ಮಂಡಳಿ ತಿಳಿಸುತ್ತದೆ.

ಯುರೋಪಿನ ಕ್ರೊಯೇಷಿಯಾದ ಕ್ರಿಸ್ಟಿನಾ ಬಾಬಿಕ್‌ ಎಂಬುವವರು ಆಯುರ್ವೇದ ವೈದ್ಯರಾಗಿದ್ದಾರೆ. ಅಕ್ಯುಪ್ರೇಶರ್‌, ಧ್ಯಾನ, ಪ್ರಾಣಾಯಾಮ ಮತ್ತು ಯೋಗದಲ್ಲಿ ಸಾಕಷ್ಟು ಪರಿಣಿತಿ ಪಡೆದವರು. ಶಿವಕುಮಾರ ಸ್ವಾಮೀಜಿ ನಾಶಿಮಠ ಅವರ ಶಿಷ್ಯೆ ಕೂಡ ಹೌದು. ಶಿವಕುಮಾರ ಸ್ವಾಮೀಜಿ ಸಂಪರ್ಕಕ್ಕೆ ಬಂದ ಬಳಿಕ ಮಠದ ಬಗ್ಗೆ ತಿಳಿದುಕೊಂಡು ಇಲ್ಲಿಗೆ ಆಗಮಿಸಿದ್ದುಂಟು. ಇದೀಗ ಅವರ ಗುರುಗಳಾದ ಶಿವಕುಮಾರ ಶ್ರೀಗಳು ಇಲ್ಲವಂತೆ. ಆದರೂ ಇವರು ಮಠಕ್ಕೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಮೊನ್ನೆ ಜಾತ್ರೆಯ ವೇಳೆ ಏರ್ಪಡಿಸಲಾಗಿದ್ದ ವಿಶ್ವ ವೇದಾಂತ ಪರಿಷತ್‌ಗೂ ಆಗಮಿಸಿ ಪಾಲ್ಗೊಂಡಿದ್ದುಂಟು. ಹೀಗೆ ಬಂದವರು ಅಜ್ಜನ ಚರಿತ್ರೆಯ ಪುಸ್ತಕವನ್ನೂ ಖರೀದಿಸಿಕೊಂಡು ಹೋಗಿ ಅಧ್ಯಯನ ಮಾಡುವುದುಂಟು.

ಒಟ್ಟಿನಲ್ಲಿ ಅಜ್ಜನ ಮಹಿಮೆ, ಸಂದೇಶಗಳ ಖ್ಯಾತಿ ವಿದೇಶಗಳಲ್ಲೂ ಹಬ್ಬಿ ವಿದೇಶಿಗರು ಆಗಮಿಸುತ್ತಿರುವುದಂತೂ ಸತ್ಯ. ಮಂತ್ರ ಜಪ

ವಿದೇಶಿಗರು ಸಾಕಷ್ಟು ಜನ ಅಜ್ಜನ ಮಠಕ್ಕೆ ಬರುತ್ತಿದ್ದಾರೆ. ಆರು ತಿಂಗಳಿಗೊಮ್ಮೆ, ಅಥವಾ ವರ್ಷಕ್ಕೊಮ್ಮೆ ತಂಡಗಳಲ್ಲಿ ಕೆಲ ವಿದೇಶಿಗರು ಬಂದು ಗಂಟೆಗಟ್ಟಲೇ ಪಂಚಾಕ್ಷರಿ ಮಂತ್ರ ಜಪಿಸಿ ಹೋಗುತ್ತಿದ್ದಾರೆ. ಅಜ್ಜನ ಕಥಾಮೃತದ ಇಂಗ್ಲೀಷ್‌ ಪ್ರತಿಯನ್ನೂ ಖರೀದಿಸಿಕೊಂಡು ಹೋಗುವುದುಂಟು.

- ಬಸವರಾಜ ಕಲ್ಯಾಣಶೆಟ್ಟರ್‌, ಚೇರಮನ್‌ರು, ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್‌ ಕಮಿಟಿಮಠದಲ್ಲಿ ನೆಮ್ಮದಿ

ನನಗೆ ಕಳೆದ ಕೆಲ ವರ್ಷದ ಹಿಂದೆ ನಮ್ಮ ಗುರುಗಳಾದ ಶಿವಕುಮಾರ ಸ್ವಾಮೀಜಿ ನಾಶಿಮಠ ಅವರಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ, ಮಠದ ಬಗ್ಗೆ ಗೊತ್ತಾಯಿತು. ಆಗಿನಿಂದಲೂ ನಾನು ಮಠಕ್ಕೆ ಆಗಾಗ ಬರುತ್ತಿರುತ್ತೇನೆ. ಸಿದ್ಧಾರೂಢ ಮಠದಲ್ಲಿ ನೆಮ್ಮದಿ ಸಿಗುತ್ತದೆ.

ಕ್ರಿಸ್ಟಿನಾ ಬಾಬಿಕ್‌, ಯೂರೋಪ,