ಸಾರಾಂಶ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೀವು ತಪ್ಪಿತಸ್ಥರು ಎಂದು ಹೈಕೋರ್ಟ್ ಹೇಳಿದೆ. ಯಡಿಯೂರಪ್ಪ ಅವರಿಗೆ ಯಾವುದೇ ಕೋರ್ಟ್ ರಾಜಿನಾಮೆ ಕೊಡುವಂತೆ ಹೇಳಿರಲಿಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹಾವೇರಿ (ಶಿಗ್ಗಾಂವಿ): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೀವು ತಪ್ಪಿತಸ್ಥರು ಎಂದು ಹೈಕೋರ್ಟ್ ಹೇಳಿದೆ. ಯಡಿಯೂರಪ್ಪ ಅವರಿಗೆ ಯಾವುದೇ ಕೋರ್ಟ್ ರಾಜಿನಾಮೆ ಕೊಡುವಂತೆ ಹೇಳಿರಲಿಲ್ಲ. ನಿಮ್ಮ ಮೇಲಿನ ಆರೋಪ ಮರೆಮಾಚಲು ಧಮ್ಕಿ ಹಾಕಿದರೆ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಬಿಜೆಪಿಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ನಾಯಕ ಯಡಿಯೂರಪ್ಪನವರ ಬಗ್ಗೆ ಕುನ್ಹಾ ಕಮಿಷನ್ ರಚನೆ ಮಾಡಿದ್ದಾರೆ. ಕುನ್ಹಾ ಕಮಿಷನ್‌ನವರು ಯಡಿಯೂರಪ್ಪ ಹಾಗೂ ರಾಮುಲು ಅವರಿಗೆ ನೋಟಿಸ್ ನೀಡದೇ ತಾತ್ಕಾಲಿಕ ವರದಿ ನೀಡಿದ್ದಾರೆ. ಸಿದ್ದರಾಮಣ್ಣ ನೀವು ವಾಲ್ಮೀಕಿ ಹಗರಣದಲ್ಲಿ ೧೯೦ ಕೋಟಿ ನುಂಗಿಲ್ಲ, ₹೯೦ ಕೋಟಿ ನುಂಗಿದ್ದೇನೆ ಅಂತ ಹೇಳಿದ್ದೀರಿ. ಸಗಣಿ ಎಷ್ಟು ತಿಂದರೂ ಸಗಣಿಯೇ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಒಂದೂ ಮನೆ ಕೊಟ್ಟಿಲ್ಲ ಅಂತ ಕೇಳುತ್ತೀರಿ, ಶಿಗ್ಗಾಂವಿ-ಸವಣೂರಿನಲ್ಲಿ ಊರಿಗೆ ಊರೇ ಹೊಸ ಮನೆ ಕಟ್ಟಿಸಿದ್ದೇವೆ. ನೀವು ಒಂದಾದರೂ ಮನೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಶಿಗ್ಗಾಂವಿ ಸಂತೆ ಮೈದಾನದಲ್ಲಿ ಮುಸ್ಲಿಂ ಧ್ವಜ ಬಂದಿದೆ. ಇದುವರೆಗೂ ಈ ಧ್ವಜ ಇರಲಿಲ್ಲ. ಈ ಕ್ಷೇತ್ರದಲ್ಲಿ ಹೇಳೋರು ಕೇಳೋರು ಇಲ್ವಾ, ನಾವೂ ಸಂತೆ ಮೈದಾನದಲ್ಲಿ ಭಗವಾ ಧ್ವಜ ಹಾರಿಸುತ್ತೇವೆ. ಇದೆಲ್ಲ ನಿಲ್ಲಬೇಕೆಂದರೆ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದು ಜೋಶಿ ಹೇಳಿದರು.
ಜನರ ಮನಸ್ಸು ಬೇರೆಡೆ ತಿರುಗಿಸಲು ನಾಟಕ: ಪಿಪಿಇ ಕಿಟ್ ಖರೀದಿ ಕುರಿತು ತನಿಖೆ ಮಾಡುತ್ತಿರುವ ನ್ಯಾ. ಮೈಕೆಲ್ ಡಿ-ಕುನ್ಹಾ ಅವರೇ ನೀವು ನ್ಯಾಯಮೂರ್ತಿ, ನೀವು ಏಜೆಂಟರಲ್ಲ. ನ್ಯಾ. ಮೈಕೆಲ್ ಡಿ ಕುನ್ಹಾ ಯಾವಾಗಲೂ ನಮ್ಮ ವಿರುದ್ಧ ಇದ್ದವರು, ಈಗ ಚುನಾವಣೆ ನಡೆಯುವ ಸಂದರ್ಭದಲ್ಲಿ ಯಾಕೆ ಮಧ್ಯಂತರ ವರದಿ ಕೊಡಬೇಕಿತ್ತು? ಒಂದೂವರೆ ವರ್ಷದಿಂದ ಈ ಸರ್ಕಾರ ಏನು ಮಾಡುತ್ತಿತ್ತು? ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ನಾಟಕ ಹೂಡಿದ್ದಾರೆ. ಇದರಲ್ಲಿ ಯಾವುದೇ ಧಮ್ಮಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.