ಮುಡಾ ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ, ಮಾಜಿ ತಹಶೀಲ್ದಾರ್‌ಗೆ ಇ.ಡಿ. ಗ್ರಿಲ್‌!

| Published : Nov 15 2024, 12:34 AM IST / Updated: Nov 15 2024, 08:05 AM IST

CM Siddaramaiah Muda Case
ಮುಡಾ ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ, ಮಾಜಿ ತಹಶೀಲ್ದಾರ್‌ಗೆ ಇ.ಡಿ. ಗ್ರಿಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಮುಡಾ ಮಾಜಿ ಅಧ್ಯಕ್ಷ ಮರೀಗೌಡ ಮತ್ತು ಮಾಜಿ ತಹಶೀಲ್ದಾರ್‌ ಮಲ್ಲಿಗೆ ಶಂಕರ್‌ ಅವರ ತೀವ್ರ ವಿಚಾರಣೆ ನಡೆಸಿದ್ದಾರೆ.

 ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಮುಡಾ ಮಾಜಿ ಅಧ್ಯಕ್ಷ ಮರೀಗೌಡ ಮತ್ತು ಮಾಜಿ ತಹಶೀಲ್ದಾರ್‌ ಮಲ್ಲಿಗೆ ಶಂಕರ್‌ ಅವರ ತೀವ್ರ ವಿಚಾರಣೆ ನಡೆಸಿದ್ದಾರೆ.

ಸುಮಾರು ಐದು ಗಂಟೆಗಿಂತಲೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ನಿವೇಶನ ಹಂಚಿಕೆ ಕುರಿತ ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.

ಮುಡಾ ಹಗರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಮರೀಗೌಡ ಅವರು ಮುಡಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಕಾರಣ ಮುಡಾ ಹಗರಣದಲ್ಲಿ ಮರೀಗೌಡ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಯಿತು. ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ನೊಟೀಸ್‌ ನೀಡಿದ್ದರೂ, ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ವಿಚಾರಣೆಗೆ ಹಾಜರಾಗಿ ಇ.ಡಿ. ಅಧಿಕಾರಿಗಳು ಕೇಳಿರುವ ಮಾಹಿತಿಗಳಿಗೆ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಹಗರಣದ ಅವಧಿಯಲ್ಲಿ ತಹಶೀಲ್ದಾರ್‌ ಆಗಿದ್ದ ಮಲ್ಲಿಗೆ ಶಂಕರ್‌ ಅವರಿಂದಲೂ ಮಾಹಿತಿ ಕಲೆಹಾಕಲಾಗಿದೆ ಎಂದು ಅವು ಹೇಳಿವೆ.

ದಶಕಗಳಿಂದ ಸಿದ್ದು ಆಪ್ತ ಮರೀಗೌಡ:

ಸಿದ್ದರಾಮಯ್ಯ ಜತೆ ಮರೀಗೌಡ ಆಪ್ತತೆ ಹಲವು ದಶಕಗಳಿಂದಲೂ ಇದ್ದು, 1983ರಿಂದಲೂ ಮರೀಗೌಡ ಅವರು ಸಿದ್ದರಾಮಯ್ಯ ಜತೆ ಕಾರ್ಯ ನಿರ್ವಹಿಸುತ್ತಿದ್ದಾರೆ. 1995ರಲ್ಲಿ ಮರೀಗೌಡ ಅವರನ್ನು ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 2000ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಅವರಿಗೆ ಮುಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಹಗರಣ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಅವರು ಕಳೆದ ತಿಂಗಳು ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮುಡಾ ಹಗರಣದಲ್ಲಿ ಅವರ ಪಾತ್ರ ಮತ್ತು ಸಿದ್ದರಾಮಯ್ಯ ಪಾತ್ರ ಪ್ರಶ್ನಿಸಲಾಗಿದೆ. ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ರಾಜಕೀಯವಾಗಿ ಪ್ರಭಾವ ಬೀರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮುಡಾ ಹಗರಣ ವಿಚಾರದಲ್ಲಿ ಕೇಳಿಬಂದಿರುವ ಹೆಸರುಗಳು ಮತ್ತು ದಾಳಿ ವೇಳೆ ಪತ್ತೆಯಾದ ಮಾಹಿತಿ ಮೇರೆಗೆ ಒಬ್ಬರಾದ ಮೇಲೆ ಒಬ್ಬರಂತೆ ಕರೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. 

ಮರೀಗೌಡ ಆಪ್ತ ಶಿವಣ್ಣಗೆ ಅನಾರೋಗ್ಯ!

ಬೆಂಗಳೂರು: ಮುಡಾ ಹಗರಣ ಸಂಬಂಧ ಇ.ಡಿ. ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಅಧ್ಯಕ್ಷ ಮರೀಗೌಡ ಆಪ್ತ ಶಿವಣ್ಣ ಎಂಬುವವರು ಅನಾರೋಗ್ಯಕ್ಕೊಳಗಾದ ಪ್ರಸಂಗ ನಡೆಯಿತು.

ಶಾಂತಿನಗರದಲ್ಲಿನ ಕಚೇರಿಗೆ ಮರೀಗೌಡ ಹಾಜರಾಗಿದ್ದ ವೇಳೆ ಶಿವಣ್ಣ ಎಂಬಾತನು ಸಹ ಅವರ ಜತೆ ಆಗಮಿಸಿದ್ದ. ಈ ವೇಳೆ ಆತನನ್ನು ಸಹ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದರು ಎಂದು ಹೇಳಲಾಗಿದೆ. ಶಿವಣ್ಣಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡ ಕಾರಣ ತಕ್ಷಣ ಇ.ಡಿ. ಅಧಿಕಾರಿಗಳು ವಿಲ್ಸನ್‌ಗಾರ್ಡನ್‌ನಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು ಎಂದು ಹೇಳಲಾಗಿದೆ.