ಸಾರಾಂಶ
ದೊಡ್ಡಬಳ್ಳಾಪುರ: ರಾಜಧಾನಿಯ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈಗಾರಿಕಾಭಿವೃದ್ದಿ, ನಗರೀಕರಣ ಮತ್ತು ಕೃಷಿ, ನೇಕಾರಿಕೆಯ ಅಸ್ಥಿರತೆಯ ನಡುವೆ ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಬೆಂಗಳೂರಿಗೆ ಪರ್‍ಯಾಯವಾಗಿ ಬೆಳೆಯುತ್ತಿರುವ ಗ್ರಾಮಾಂತರ ಜಿಲ್ಲೆಗೆ ಅಗತ್ಯ ಮೂಲಸೌಕರ್‍ಯಗಳನ್ನು ಹೊಂದುವುದು ಸವಾಲಿನ ಕೆಲಸವಾಗಿದ್ದು, ಇಂದು ಮಂಡನೆಯಾಗಲಿರುವ 2023-24ನೇ ಸಾಲಿನ ಬಜೆಟ್‌ನಲ್ಲಿ ಮಹತ್ತರ ಯೋಜನೆಗಳನ್ನು ಎದುರು ನೋಡುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಮೊದಲ ವರ್ಷದ ಬಜೆಟ್ ಇದಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಬೆಂಗಳೂರು ಹೊರವಲಯದ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್‍ಯ ಯೋಜನೆಗಳ ಪ್ರಸ್ತಾಪ ಇರುವ ಹಿನ್ನಲೆ, ಈ ಉದ್ದೇಶ ಸಾಕಾರಕ್ಕೆ ಪೂರಕವಾಗುವಂತೆ ಜನಸ್ನೇಹಿ ಬಂಪರ್ ಯೋಜನೆಗಳು ಘೋಷಣೆಯಾಗಲಿವೆಯೇ ಎಂಬ ಕುತೂಹಲ ಇಮ್ಮಡಿಸಿದೆ.ಬೆಂಗಳೂರು ಕೇಂದ್ರಿತವಾಗಿದ್ದ ಜಿಲ್ಲಾಡಳಿತ, ಜಿಲ್ಲೆಯ ಭೌಗೋಳಿಕ ವ್ಯಾಪ್ತಿಗೆ ಸ್ಥಳಾಂತರಗೊಂಡು ೭ ವರ್ಷಗಳಾಗುತ್ತಾ ಬಂದರೂ ಈವರೆಗೆ ಜಿಲ್ಲಾ ಕೇಂದ್ರ ಘೋಷಣೆ ಆಗಿಲ್ಲ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಡುವೆ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯೇ ಅನುಮೋದನೆ ನೀಡಿ, ಉದ್ಘಾಟನೆಯನ್ನೂ ಮಾಡಲಾಗಿತ್ತು.
ಇದೀಗ ಜಿಲ್ಲಾಡಳಿತ ಕೇಂದ್ರದಿಂದ ಜಿಲ್ಲೆಯ ತಾಲೂಕುಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಸಮರ್ಪಕಗೊಳ್ಳಬೇಕಿದೆ. ಅದರಲ್ಲೂ ಮುಖ್ಯವಾಗಿ ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳ ಜನರಿಗೆ ಜಿಲ್ಲಾಡಳಿತ ಭವನ ತಲುಪಲು ಸರ್ಕಾರಿ ನೇರ ಸಾರಿಗೆ ಸಂಪರ್ಕ ಅತ್ಯಂತ ವಿರಳವಾಗಿದೆ. ಕಳೆದ ಹಲವು ವರ್ಷಗಳಿಂದ ಬಜೆಟ್‌ನಲ್ಲಿ ಜಿಲ್ಲೆಯ ಜನರು ನಿರೀಕ್ಷಿಸಿದ ಯಾವುದೇ ಮಹತ್ವದ ಯೋಜನೆಗಳು ಮಂಜೂರಾಗದೆ ನಿರಾಶೆ ಅನುಭವಿಸಿದ್ದೇ ಹೆಚ್ಚು. ಈ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಸರ್ವಾಂಗೀಣ ಪ್ರಗತಿಯನ್ನು ಉತ್ತೇಜಿಸುತ್ತದೆ ಎಂಬ ಭರವಸೆಯಲ್ಲಿ ಜನರಿದ್ದಾರೆ.ಜಿಲ್ಲೆಗೆ ಬೇಕು ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇಡೀ ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರವೂ ಒಂದಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಘೋಷಣೆ ನಿರೀಕ್ಷಿಸಲಾಗಿದೆ. ಜತೆಗೆ ದೊಡ್ಡಬಳ್ಳಾಪುರದಲ್ಲಿ ನನೆಗುದಿಗೆ ಬಿದ್ದಿರುವ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಬೇಕಿದೆ.ಮೂಲಸೌಕರ್‍ಯ ವೃದ್ದಿಗೆ ಆದ್ಯತೆ:
ರಿಯಲ್ ಎಸ್ಟೇಟ್ ಉದ್ಯಮ ವ್ಯವಸ್ಥಿತವಾಗಿ ಬೆಳೆದಿರುವ ಗ್ರಾಮಾಂತರ ಜಿಲ್ಲೆಯ ಮುಖ್ಯ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಅಭಾವ ದೊಡ್ಡದು. ಇದಕ್ಕಾಗಿ ಶಾಶ್ವತ ಯೋಜನೆಯೊಂದರ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಎತ್ತಿನಹೊಳೆ ಯೋಜನೆ ನಿಧಾನಗತಿಯಲ್ಲಿ ಕಾಮಗಾರಿ ನಡೆದಿದ್ದು, ಯೊಜನೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ಈ ಮಧ್ಯೆ ನಾಯಂಡಹಳ್ಳಿ-ವೃಷಭಾವತಿ ವ್ಯಾಲಿಯಿಂದ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಸ್ತಾಪವಾಗಿದ್ದರೂ, ಕಾರ್‍ಯರೂಪಕ್ಕೆ ಬಂದಿಲ್ಲ. ಇದರ ಜಾರಿಗೆ ಬಜೆಟ್‌ನಲ್ಲಿ ವ್ಯವಸ್ಥಿತ ಯೋಜನೆ, ಅನುದಾನ ಅಗತ್ಯವಾಗಿದೆ.ಪ್ರವಾಸೋದ್ಯಮಕ್ಕೆ ಉತ್ತೇಜನ:
ಧಾರ್ಮಿಕ, ಐತಿಹಾಸಿಕ, ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ. ಸುಪ್ರಸಿದ್ದ ನಾಗಾರಾಧನೆ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ದಕ್ಷಿಣ ಕಾಶಿ ಶಿವಗಂಗೆ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಮಾಕಳಿ ದುರ್ಗ ನಿಸರ್ಗ ಪ್ರವಾಸೋದ್ಯಮ ಅಭಿವೃದ್ದಿಗೆ ಉತ್ತಮ ತಾಣ. ಅದೇ ರೀತಿ ಗಂಗರ ಕಾಲದ ಐತಿಹಾಸಿಕ ಹಾಗೂ ಧಾರ್ಮಿಕ ತಾಣ ಹುಲುಕುಡಿ, ಮಣ್ಣೆ, ದೇವನಹಳ್ಳಿ ಕೋಟೆ ಇತ್ಯಾದಿಗಳನ್ನು ಒಳಗೊಂಡ ಗ್ರಾಮಾಂತರ ಜಿಲ್ಲಾ ಪ್ರವಾಸಿ ಹಬ್ ನಿರ್ಮಾಣಕ್ಕೆ ಯೋಜನೆ ಅಗತ್ಯವಿದೆ.ರೈಲ್ವೇ ಯೋಜನೆಗಳ ವಿಸ್ತರಣೆ ಅಗತ್ಯ:
ಸಬ್ ಅರ್ಬನ್ ರೈಲು ಯೋಜನೆಯನ್ನು ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ವಿಸ್ತರಣೆ ಮಾಡಲಾಗಿದ್ದು, ರಾಜಾನುಕುಂಟೆಯವರೆಗೆ ಬಂದಿರುವ ಮಾರ್ಗವನ್ನು ದೊಡ್ಡಬಳ್ಳಾಪುರದವರೆಗೆ ವಿಸ್ತರಿಸುವ ಅಗತ್ಯವಿದೆ. ಅದೇ ರೀತಿ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಪಟ್ಟಣಗಳಿಗೆ ಮೆಮು ರೈಲು ಸಂಪರ್ಕ ನೀಡುವುದರಿಂದ ಕೈಗಾರಿಕಾಭಿವೃದ್ದಿಗೆ ಪೂರಕವಾಗಲಿದೆ. ಈಗಾಗಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಪ್ರಸ್ತಾವನೆ ಕಾರ್‍ಯಗತಗೊಳ್ಳುವ ಹಂತದಲ್ಲಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ವಿಶೇಷ ಆದ್ಯತೆ ದೊರೆಯಬೇಕಿದೆ.ನಿರೀಕ್ಷೆಗಳು ಹಲವು:
ಉಳಿದಂತೆ ಸಾಸಲು ಹೋಬಳಿಯಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆ, ದೊಡ್ಡಬಳ್ಳಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಿವೇಶನ, ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತರ, ಜಾಲಗೆರೆ-ಹುಲುಕುಡಿ-ಮಾಕಳಿ-ಘಾಟಿ ಸುಬ್ರಹ್ಮಣ್ಯ ವನ್ಯಜೀವಿ ತಾಣ ಘೋಷಣೆ ಸೇರಿದಂತೆ ಹಲವು ಯೋಜನೆಗಳ ಸಾಕಾರಕ್ಕೆ ಪುಷ್ಠಿ ಸಿಗಬೇಕು ಎಂಬುದು ಜನಾಗ್ರಹವಾಗಿದೆ.14ಕೆಡಿಬಿಪಿ1-ರಾಜ್ಯದ ಮೊದಲ ಜವಳಿ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿರುವ ದೊಡ್ಡಬಳ್ಳಾಪುರ ಜವಳಿ ಪಾರ್ಕ್.
14ಕೆಡಿಬಿಪಿ2- ಮಾಕಳಿ ದುರ್ಗ ಪ್ರವಾಸಿ ತಾಣ.