ಜಾತಿ ಗಣತಿ- ಸಿದ್ದು ಗಾಯ ಮಾಡಿಕೊಂಡಿದ್ದಾರೆ

| Published : Oct 11 2024, 11:55 PM IST

ಸಾರಾಂಶ

ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಕಚೇರಿ ಪೂಜೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ಗಾಯ ಕೆರೆದುಕಂಡು ಮೈಯೆಲ್ಲ ಗಾಯ ಆಗಿದೆ ಎಂದ ಅವರು ಸಿದ್ದರಾಮಯ್ಯನವರಿಗೆ ನಮಗಿಂತ ಜಾಸ್ತಿ ಶತ್ರುಗಳು ಅವರ ಪಕ್ಷದಲ್ಲೇ ಇದ್ದಾರೆ ಎಂದರು.

ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ‌ ಅಂತ ನಾವು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಈ ವಿಷಯವನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳುವುದು ಏಕೆ ಎಂದರು. ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಆಗ ಮಾಡಿಸಿ ಯಾರು ಬೇಡ ಅಂತಾರೆ. ವರದಿ ವೈಜ್ಞಾನಿಕವಾಗಿಲ್ಲ ಅಂತಾ ತುಂಬಾ ಜನ ಬುದ್ದಿಜೀವಿಗಳು ಹೇಳುತ್ತಿದ್ದಾರೆ. ಅದನ್ನು ಪುನರ್ ಪರಿಶೀಲನೆ ಮಾಡಿದರೆ ದೇಶ ಏನು ಮುಳುಗಿ ಹೋಗುವುದಿಲ್ಲ ಎಂದರು.

ರತನ್ ಟಾಟಾ ಈ ದೇಶ ಕಂಡ ಒಬ್ಬ ಅಪ್ರತಿಮಿ ಉದ್ಯಮಿ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮೊದಲಿಗರು. ಕೈಗಾರಿಕೋದ್ಯಮಿಯಾಗಿ ಬೇರೆ ಬೇರೆ ದೇಶಗಳ ಜೊತೆಗೆ ಸೆಣಸಾಟ ಮಾಡಿ, ಭಾರತೀಯರು ಯಾವುದರಲ್ಲೂ ಕಡಿಮೆಯಿಲ್ಲ ಅಂತ ತೋರಿಸಿದವರಲ್ಲಿ ರತನ್ ಟಾಟಾ ಒಬ್ಬರು ಎಂದರು.

ಇತ್ತಿಚೀನ ದಿನಗಳಲ್ಲಿ ಅವರ ಇಡೀ ಅಸೆಟ್ ನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು, ಈ ತೀರ್ಮಾನ ಸೂರ್ಯಚಂದ್ರ ಇರುವ ತನಕ ಉಳಿಯುತ್ತದೆ ಎಂದರು. ಇಂತಹ ಪುಣ್ಯಾತ್ಮರು ಬದುಕಿ ಬೆಳೆದಿದ್ದರಿಂದಲೇ ಮೋದಿಯವರಿಗೆ ಶಕ್ತಿ ಬಂದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರೋಣ. ಇನ್ನೊಬ್ಬ ರತನ್ ಟಾಟಾ ಭಾರತದಲ್ಲಿ ಹುಟ್ಟಿ ಬರಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೀವಿ ಎಂದರು.

ಪ್ರಧಾನಿ ಮೋದಿಯೊಂದಿಗೆ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರಧಾನಿಗಳ ಜೊತೆಗೆ ಸುಮಾರು ಟೈಮ್ ಅನ್ನು ಕಳೆದಿದ್ದೇನೆ ನನ್ನ ಕಲ್ಪನೆಯ ದಕ್ಷಿಣ ಭಾರತವನ್ನು ನಿರ್ಮಾಣ ಮಾಡಬೇಕು ಅನ್ನೋದು ಅವರ ಬಯಕೆ‌. ನನಗೆ ಕೆಲವು ನಿರ್ದೇಶನ ನೀಡಿದ್ದಾರೆ ಎಂದರು.ದಕ್ಷಿಣ ಭಾರತದಲ್ಲಿ ಕನಿಷ್ಟ 50 ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ತಂಡದೊಂದಿಗೆ ಕೆಲಸ ಮಾಡಿ. ಬಡವರು, ಧ್ವನಿ ಇಲ್ಲದವರನ್ನ ಗುರುತಿಸಿ, ಯಾವ ಜಾತಿ ಕುಲ ಅನ್ನದೆ ಸವಲತ್ತು ನೀಡಿ ಎಂದರು. ದೇಶದ ಎಲ್ಲಾ ಕಡೆ ಓಡಾಡಿಕೊಂಡು ಬಂದೆ. ನಾಲ್ಕೂವರೆ ಗಂಟೆ ಕಾಲ ಮೋದಿ ಜೊತೆಗಿದ್ದೆ. ಮೋದಿಯವರ ಹತ್ತು ವರ್ಷಗಳ ಆಡಳಿತ ಸಾಮಾನ್ಯರಿಗೆ ಖುಷಿ‌ಕೊಟ್ಟಿದೆ. ಹರಿಯಾಣ, ಜಮ್ಮು ಕಾಶ್ಮೀರಾ ಚುನಾವಣೆ ಮುಖೇನ ಭಾರತದ ಸಾರ್ವಭೌಮತೆಗೆ ಮೋದಿಯವರ ಅಪಾರ ಕೊಡುಗೆ ಇದೆ ಅನ್ನೋದನ್ನ ಪಕ್ಷಾತೀತವಾಗಿ ಒಪ್ಪಿಕೊಂಡಿದ್ದಾರೆ ಎಂದರು.