ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರದಿಂದ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ಧತೆ ಶುರು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರದಿಂದ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ಧತೆ ಶುರು ಮಾಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಹಣಕಾಸು ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಮೊದಲ ಸಭೆ ನಡೆಸಿದ್ದಾರೆ. ನಂತರ ಸಿದ್ದರಾಮಯ್ಯ ಅವರು ಇಲಾಖಾವಾರು ಸಭೆ, ರೈತರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಕ್ಷೇತ್ರವಾರು ತಜ್ಞರ ಜತೆ ಸಭೆ ನಡೆಸಲಿದ್ದಾರೆ.

ಜ.22 ರಿಂದ ಜ.31ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಹೀಗಾಗಿ ಮಾರ್ಚ್‌ ಮೊದಲ ವಾರದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಬಜೆಟ್‌ ಮಂಡನೆ ಮಾಡುವ ಸಾಧ್ಯತೆಯಿದೆ.

ಅಧಿವೇಶನದ ಬಳಿಕ ಪೂರ್ಣ ಸಿದ್ಧತೆ:

ಬಜೆಟ್ ಸಿದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜ.22ರಿಂದ ಜಂಟಿ ಅಧಿವೇಶನ, ಮನರೇಗಾ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನ ಮುಗಿದ ಕೂಡಲೇ ಬಜೆಟ್‌ ಮಂಡನೆ ಸಿದ್ಧತೆ ಪೂರ್ಣ ಪ್ರಮಾಣದಲ್ಲಿ ಶುರುವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ 17ನೇ ಬಜೆಟ್‌:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ದಾಖಲೆಯ 16 ಬಜೆಟ್‌ ಮಂಡಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ್ದ ರಾಮಕೃಷ್ಣ ಹೆಗಡೆ (14) ದಾಖಲೆಯನ್ನು 2023ರ ಜೂನ್‌ನಲ್ಲೇ ಸಿದ್ದರಾಮಯ್ಯ ಮುರಿದಿದ್ದಾರೆ. ಮಾರ್ಚ್‌ ಮೊದಲ ವಾರದಲ್ಲಿ ಮಂಡಿಸುವ ಬಜೆಟ್‌ 17ನೇ ಬಜೆಟ್‌ ಆಗಲಿದೆ.

ದೇಶದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ (18) ಮಂಡಿಸಿರುವ ಗುಜರಾತ್‌ನ ವಜುಭಾಯಿ ವಾಲಾ (ವಿ.ಆರ್‌. ವಾಲಾ) ಅವರ ದಾಖಲೆ ಸರಿಗಟ್ಟಲು ಮತ್ತೊಂದು ಬಜೆಟ್‌ ಮಂಡನೆ ಮಾಡಬೇಕಾದ ಅನಿವಾರ್ಯತೆ ಇದೆ.

ಇನ್ನು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಫೆ. 1 ರಂದು ಭಾನುವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.ವರಿಷ್ಠರು ಕರೆದಿಲ್ಲ, ಕರೆದರೆ ದೆಹಲಿಗೆ ಹೋಗುವೆ:

ಪಕ್ಷದ ವರಿಷ್ಠರು ಕರೆದಿಲ್ಲ, ವರಿಷ್ಠರಿಂದ ಕರೆ ಬಂದರೆ ದೆಹಲಿಗೆ ತೆರಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೊಂಡಜ್ಜಿ ಬಸಪ್ಪ ಸಭಾಂಗಣದ ಬಳಿ ಮಂಗಳವಾರ ದೆಹಲಿ ಪ್ರವಾಸ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ವರಿಷ್ಠರು ಕರೆ ನೀಡಿದರೆ ದೆಹಲಿಗೆ ತೆರಳುತ್ತೇನೆ ಎಂದರು. ವಿಧಾನಮಂಡಲ ವಿಶೇಷ ಅಧಿವೇಶನ ಕುರಿತು ಪ್ರತಿಕ್ರಿಯಿಸಿ, ಜ.22ರಿಂದ 31ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಮೊದಲಿಗೆ ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣ ಇರಲಿದೆ. ನಂತರ ಮನರೇಗಾ ಯೋಜನೆ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಅಧಿವೇಶನ ನಂತರ ಬಜೆಟ್‌ ಸಿದ್ಧತೆ ಆರಂಭಿಸಲಾಗುವುದು ಎಂದು ಹೇಳಿದರು.