ಬಾಂಬ್‌ ಸ್ಫೋಟಿಸಿದ ರಾಮೇಶ್ವರಂ ಕೆಫೆಗೆ ಸಿದ್ದು ಭೇಟಿ; 2-3 ದಿನದಲ್ಲೇ ಬಾಂಬರ್‌ ಪತ್ತೆ ಮಾಡುವ ಭರವಸೆ

| Published : Mar 03 2024, 01:31 AM IST / Updated: Mar 03 2024, 10:24 AM IST

ಬಾಂಬ್‌ ಸ್ಫೋಟಿಸಿದ ರಾಮೇಶ್ವರಂ ಕೆಫೆಗೆ ಸಿದ್ದು ಭೇಟಿ; 2-3 ದಿನದಲ್ಲೇ ಬಾಂಬರ್‌ ಪತ್ತೆ ಮಾಡುವ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಪೋಟ ಘಟನೆ ಸಂಬಂಧ ಎರಡು-ಮೂರು ದಿನಗಳಲ್ಲಿ ದುಷ್ಕರ್ಮಿಯನ್ನು ಪತ್ತೆ ಮಾಡುತ್ತೇವೆ. ಈಗಾಗಲೇ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಪೋಟ ಘಟನೆ ಸಂಬಂಧ ಎರಡು-ಮೂರು ದಿನಗಳಲ್ಲಿ ದುಷ್ಕರ್ಮಿಯನ್ನು ಪತ್ತೆ ಮಾಡುತ್ತೇವೆ. ಈಗಾಗಲೇ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ರಾಮೇಶ್ವರಂ ಕೆಫೆಗೆ ಭೇಟಿ ಹಾಗೂ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ ಸಿಸಿಟಿವಿಯಲ್ಲಿ ಒಬ್ಬ ಅಪರಿಚಿತನನ್ನು ಪತ್ತೆ ಮಾಡಲಾಗಿದೆ. 

ಆತ ಟೋಪಿ, ಮಾಸ್ಕ್‌ ಹಾಕಿಕೊಂಡು ಬಸ್‌ನಲ್ಲಿ ಬಂದಿದ್ದಾನೆ. ಬ್ಯಾಗ್‌ನಲ್ಲಿ ಟೈಮ್‌ ಬಾಂಬ್‌ ತಂದು ಹೋಟೆಲ್‌ನಲ್ಲಿ ಇರಿಸಿದ್ದಾನೆ. ಅವನು ಬಂದು ಹೋದ ನಂತರ ಸ್ಫೋಟ ಸಂಭವಿಸಿದೆ. 

ಆತ ಹೋಟೆಲ್‌ನಲ್ಲಿ ತಿಂಡಿ ತಿಂದಿದ್ದಾನೆ. ಅದೆಲ್ಲವೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎರಡು-ಮೂರು ದಿನದಲ್ಲಿ ದುಷ್ಕರ್ಮಿಯನ್ನು ಪತ್ತೆ ಮಾಡಲಾಗುವುದು ಎಂದರು.

ಸದ್ಯ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದು, ಎರಡು-ಮೂರು ದಿನಗಳಲ್ಲಿ ಡಿಸ್ಚಾರ್ಜ್‌ ಆಗಲಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 

ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು, ಬ್ರೂಕ್‌ಫೀಲ್ಡ್‌ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ. 

ಎಲ್ಲ ಗಾಯಾಳುಗಳು ಚೆನ್ನಾಗಿ ಮಾತನಾಡಿದರು. ಈಗಾಗಲೇ ಇಬ್ಬರನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಸ್ಫೋಟ ಸಂಭವಿಸಿದಾಗ ಅಲ್ಲಿಯೇ ಇದ್ದ ಸ್ವರ್ಣಾಂಬ ಎಂಬುವವರಿಗೆ ಹೆಚ್ಚು ಗಾಯವಾಗಿದೆ ಎಂದು ಅವರು ತಿಳಿಸಿದರು.

ಕೆಫೆಗೆ ಭೇಟಿ, ಪರಿಶೀಲನೆ: ಇದಕ್ಕೂ ಮುನ್ನ ಬಾಂಬ್‌ ಸ್ಫೋಟಗೊಂಡ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಹಾನಿಯನ್ನು ಸಿದ್ದರಾಮಯ್ಯ ವೀಕ್ಷಿಸಿದರು. ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್‌ ಗುಪ್ತಾ ಅವರು ಘಟನೆ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ವಿಶೇಷ ತಂಡ ರಚನೆ:ಬಿಜೆಪಿಯವರ ಕಾಲದಲ್ಲಿಯೂ ಬಾಂಬ್‌ ಸ್ಫೋಟ ಸಂಭವಿಸಿದೆ. ಇದು ಅವರ ವೈಫಲ್ಯ ಅಲ್ಲವೇ? ಸ್ಫೋಟ ಮಾಡಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. 

ತನಿಖೆಯಲ್ಲಿ ಯಾವ ಸಂಘಟನೆ ಎಂಬುದು ಗೊತ್ತಾಗಲಿದೆ. ಕುಕ್ಕರ್‌ ಸ್ಫೋಟಕ್ಕೂ ಇದಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ಪರಿಶೀಲಿಸುತ್ತೇವೆ. ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೋಟೆಲ್‌ ಸ್ಫೋಟ ಭಯೋತ್ಪಾದಕ ಕೃತ್ಯವಾ ಎಂಬುದು ಸ್ಪಷ್ಟವಾಗಿಲ್ಲ: ಸಿಎಂ
ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನ ಹೋಟೆಲ್‌ನಲ್ಲಿ ನಡೆದ ಸ್ಪೋಟ ಒಬ್ಬ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯ ಕೃತ್ಯವಾ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕ ಕೃತ್ಯನಾ ಎಂಬುದು ಸಹ ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ಒಬ್ಬ ವ್ಯಕ್ತಿ ಈ ಸ್ಪೋಟ ನಡೆಸಿದ್ದಾನೆ. 

ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು, ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ, ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್‌ನಿಂದ ಇಳಿಯುವುದು ಹೋಟೆಲ್‌ಗೆ ಬರುವುದು ಎಲ್ಲಾ ದೃಶ್ಯಾವಳಿಗಳು ಸಿಕ್ಕಿವೆ. 

ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.ಒಟ್ಟು 9 ಜನರಿಗೆ ಗಾಯವಾಗಿದ್ದು, 9 ಜನರೂ ಪ್ರಾಣಯಪಾಯದಿಂದ ಪಾರಾಗಿದ್ದಾರೆ. 

ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ, ಹೋಟೆಲ್‌ ಬ್ಲಾಸ್ಟ್‌ಗೂ ಸಾಮ್ಯತೆ ಇಲ್ಲ. ಅದು ಕುಕ್ಕರ್‌ನಲ್ಲಿ ಆದ ಬ್ಲಾಸ್ಟ್. ಇಲ್ಲಿ ಯಾವ ಕುಕ್ಕರ್‌ನಲ್ಲೂ ಬ್ಲಾಸ್ಟ್ ಆಗಿಲ್ಲ ಎಂದರು.