ಸಿದ್ದು ಬಜೆಟ್‌: ದಲಿತರ ಮೂಗಿಗೆ ತುಪ್ಪ ಸವರಿದೆ

| Published : Mar 12 2025, 12:47 AM IST

ಸಾರಾಂಶ

ಚಾಮರಾಜನಗರದಲ್ಲಿ ಬಿಎಸ್ಪಿರಾಜ್ಯಧ್ಯಕ್ಷ ಎಂ.ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಮುಸಲ್ಮಾನರನ್ನು ಓಲೈಸುವ ಬಜೆಟ್ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ ವಾಸ್ತವವಾಗಿ ಸಿದ್ದರಾಮಯ್ಯ ಎರಡು ವರ್ಗಗಳಿಗೆ ಮೂಗಿಗೆ ತುಪ್ಪ, ಬೆನ್ನಿಗೆ ಚೂರಿ ಎಂಬ ನೀತಿಯ ಬಜೆಟ್‌ ಎಂದು ಬಿಸ್ಪಿ ರಾಜ್ಯಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಗೆ ಈ ಬಾರಿ ₹42 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ತಮಟೆ ಬಾರಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಕಾಯ್ದೆಯ ನಿಯಮ 7 (6) ಅನ್ವಯ ಸುಮಾರು ₹21 ಸಾವಿರ ಕೋಟೆ ಅಭಿವೃದ್ಧಿ ಕಾರ್ಯಗಳಿಗೆ ಎಂದು ವರ್ಗಾಯಿಸಿ ದ್ರೋಹ ಎಸಗಲಾಗುತ್ತಿದೆ. ಇದರ ಜೊತೆಗೆ ₹13 ಸಾವಿರ ಕೋಟಿಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ₹6 -7 ಸಾವಿರ ಕೋಟಿಗಳನ್ನು ಎಸ್ಸಿ, ಎಸ್ಟಿಗಳ ಉದ್ಯೋಗ ಸೃಷ್ಟಿಗೆ, ಸ್ವಾವಲಂಬಿ ಬದುಕಿನ ನಿರ್ಮಾಣಕ್ಕೆ ಬಳಸದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಎಸ್ಸಿ, ಎಸ್ಟಿಗಳ 8 ಅಭಿವೃದ್ಧಿ ನಿಗಮಗಳಿಗೆ ಕೇವಲ ₹488 ಕೋಟಿಗಳನ್ನು ಮಾತ್ರ ನೀಡಿರುವುದು. ಹೀಗಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಎಸ್ಸಿ/ಎಸ್ಟಿಗಳ ಅಭಿವೃದ್ಧಿಗೆ ತರಲಾಗಿದೆಯೋ ಅಥವಾ ಈ ಕಾಯ್ದೆ ಹೆಸರಿನಲ್ಲಿ ಮತ ಪಡೆದು ವಂಚಿಸಲು ತರಲಾಗಿದೆಯೋ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 2.70 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಹೇಳಿರುವ ಮುಖ್ಯಮಂತ್ರಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆಯನ್ನೇ ಮರೆತಿದ್ದಾರೆ. ಇದು ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಡುತ್ತಿರುವ ದ್ರೋಹ ಎಂದರು.

ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವ ಧನ ತಲಾ ₹2 ಸಾವಿರ ಹೆಚ್ಚಳ ಎಂದು ಘೋಷಿಸುವ ಬದಲು ಅವರ ಸೇವೆಯನ್ನು ಕಾಯಂ ಮಾಡಿದ್ದರೆ ನಿಜಕ್ಕೂ ಅನುಕೂಲವಾಗುತ್ತಿತ್ತು ಎಂದರು. ರಾಜ್ಯದಲ್ಲಿರುವ ಲಕ್ಷಾಂತರ ಕೆರೆಗಳ ಹೂಳು ತೆಗೆದು, ನದಿ ಮತ್ತು ಜಲಾಶಯಗಳಿಂದ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದರೆ ಶಾಶ್ವತವಾಗಿ ಅಂತರ್ಜಲ ಹೆಚ್ಚಳ, ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಬಹುದು ಎಂಬ ಆಲೋಚನೆ ಬಾರದಿರುವುದು ದುರಂತ ಎಂದರು.ಮಹಿಳೆಯರ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಇದರ ಬದಲು ವಿದ್ಯಾವಂತ ಹೆಣ್ಣು ಮಕ್ಕಳಿಗೆ ಕಾಯಂ ಸರ್ಕಾರಿ ಉದ್ಯೋಗ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರನ್ನು ಕಾಯಂ ಮಾಡಿದರೆ ಮಹಿಳಾ ಸಬಲೀಕರಣ ಆಗುತ್ತದೆ ಎಂಬ ವಾಸ್ತವಿಕ ಪ್ರಜ್ಞೆ ಇಲ್ಲದ ಬಜೆಟ್ ಇದಾಗಿದೆ ಎಂದರು.

ಕೃಷಿ ಕಾರ್ಮಿಕ ಗ್ರಾಮೀಣ ಮಹಿಳೆಯರು ಮೈಕ್ರೋ ಫೈನಾನ್ಸ್ ಗಳ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಮಹಿಳೆಯರಿಗೆ ಡಿಸಿಸಿ ಮತ್ತು ಸರ್ಕಾರಿ ಬ್ಯಾಂಕ್‌ಗಳು, ಕೃಷಿ ಪತ್ತಿನ ಹಾಗೂ ಹಾಲು ಉತ್ಪಾದಕರ ಸಂಘಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯ ದೊರಕುವಂತ ಯೋಜನೆಗಳನ್ನು ರೂಪಿಸಿದ್ದರೆ ನಿಜವಾಗಿಯೂ ಮಹಿಳೆಯರಿಗೆ ವರದಾನವಾಗುತ್ತಿತ್ತು. ಅಲ್ಪಸಂಖ್ಯಾತರ ಜನಸಂಖ್ಯೆ ಶೇ.15 ರಷ್ಟಿದ್ದರೂ ಬಜೆಟ್‌ನಲ್ಲಿ ಕೇವಲ ಶೇ.1ರಷ್ಟು ನೀಡಲಾಗಿದೆ. ಆದರೂ ಇದನ್ನೇ ದೊಡ್ಡ ಸಾಧನೆ ಎಂಬಂತೆ ನಂಬಿಸುತ್ತಿರುವುದು ಹಾಸ್ಯಸ್ಪದ. ಆದರೂ ಬಿಜೆಪಿ ಇದನ್ನು ಹಲಾಲ್ ಬಜೆಟ್, ಪಾಕಿಸ್ತಾನಿ ಬಜೆಟ್, ಜಮೀರ್ ಖಾನ್ ಬಜೆಟ್‌ ಎಂದು ಟೀಕಿಸುತ್ತಿರುವುದು ನಾಚಿಕೆಗೇಡು ಎಂದರು.

ಕಾಂಗ್ರೆಸ್ ಸರ್ಕಾರದ ಪ್ರತಿಷ್ಠಿತ ಗ್ಯಾರೆಂಟಿ ಯೋಜನೆಗಳಿಗೆ ₹51 ಸಾವಿರ ಕೋಟಿ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಶ್ರೀಮಂತರನ್ನು ಹೊರಗಿಟ್ಟರೆ ಖಂಡಿತ ತಪ್ಪಲ್ಲ. ಈ ಬಗ್ಗೆ ಸಿಎಂ ಚರ್ಚಿಸಲು ಸಿದ್ಧವಿಲ್ಲದಿರುವುದು ನಿರ್ಲಕ್ಷ್ಯದ ಪರಮಾವಧಿ ಎಂದರು.

ಈ ಗ್ಯಾರೆಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಈ ಹಿಂದೆಯೇ ರಾಜ್ಯದಲ್ಲಿ ಪೆಟ್ರೋಲ್, ಡಿಸೆಲ್ ಮೇಲೆ ಹೆಚ್ಚುವರಿ ತೆರಿಗೆ, ಪ್ರಯಾಣದರ ಏರಿಕೆ, ವಾಹನ ಮತ್ತು ಆಸ್ತಿ ಖರೀದಿ ಶುಲ್ಕ ಹೆಚ್ಚಳ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ದುಪ್ಪಟ್ಟು, ಬಸ್ ಪ್ರಯಾಣ ದರ ಏರಿಕೆ ಮಾಡಿ ಹೊಸ ತೆರಿಗೆ ಏರಿಕೆ ಇಲ್ಲದ ಬಜೆಟ್ ಎಂದು ಹೇಳಿಕೊಳ್ಳುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.

1.17 ಕೋಟಿ ರುಪಾಯಿಗಳ ಸಾಲದ ಹೊರೆಯನ್ನು ರಾಜ್ಯದ ಜನತೆಯ ಮೇಲೆ ಹೇರುತ್ತಿದ್ದಾರೆ. ಉದ್ಯೋಗ ಸೃಷ್ಟಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಹಾಗೂ ಎಲ್ಲಾ ವರ್ಗದ ಬಡವರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸದ ಯಾವುದೇ ಬಜೆಟ್ ಗಾತ್ರ ಎಷ್ಟೇ ದೊಡ್ಡದಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಈ ಬಗ್ಗೆ ಸರ್ಕಾರ ಯೋಚಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ನಾಗಯ್ಯ, ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ ಕೃಷ್ಣಮೂರ್ತಿ, ವಕೀಲ ಪುಟ್ಟಸ್ವಾಮಿ, ಪ್ರಕಾಶ್‌ ಅಮಚವಾಡಿ, ಚಂದ್ರಕಾಂತ್‌, ಶಿವಶಂಕರ ಇದ್ದರು.