ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸುಮಾರು 74 ಕೆರೆಗೆಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ಜುಲೈ 27ರಂದು ಬೆಳಗ್ಗೆ 11.30 ಗಂಟೆಗೆ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದ್ದಾರೆ.
- 40 ಹಳ್ಳಿಗಳ 2 ಸಾವಿರ ರೈತರು ಭಾಗಿ: ಪೂರ್ವಭಾವಿ ಸಭೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸುಮಾರು 74 ಕೆರೆಗೆಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ಜುಲೈ 27ರಂದು ಬೆಳಗ್ಗೆ 11.30 ಗಂಟೆಗೆ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಹೇಳಿದರು.ಶುಕ್ರವಾರ ಮುತ್ತಿಗೆ ಹಾಕುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು 40 ಹಳ್ಳಿಗಳ 2 ಸಾವಿರ ರೈತರು ಮುತ್ತಿಗೆ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿ ಉಪವಿಭಾಗಾಧಿಕಾರಿ (ಎಸಿ) ಕಚೇರಿಗೆ ಬರಲಿದೆ. ಅಲ್ಲಿ ಸಭೆ ನಡೆಸಿ, ಮುತ್ತಿಗೆ ಹಾಕಲಾಗುವುದು ಎಂದರು.
ಅವಳಿ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಈ ಕಾಮಗಾರಿಗೆ 3 ವರ್ಷ ಪೂರ್ಣಗೊಂಡಿದೆ. ಇದೂವರೆಗೂ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಈ ಕಾಮಗಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದ್ದು, ಅದಕ್ಕೆ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.ಈ ವರ್ಷದಲ್ಲಿ ಮುಂಗಾರು ಮಳೆ ಕುಂಠಿತವಾಗಿದೆ. ದನಕರುಗಳಿಗೆ ಕುಡಿಯಲು ನೀರು ಲಭ್ಯವಿಲ್ಲ. ಎಲ್ಲ ಕೆರೆ-ಕಟ್ಟೆಗಳು, ಬೋರ್‌ವೆಲ್‌ಗಳು ಬತ್ತಿಹೋಗಿವೆ. ಬಿತ್ತಿರುವ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ. ಈ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಬೆಳೆಸಾಲ ಮನ್ನಾ ಸೇರಿದಂತೆ ಪ್ರತಿ ಎಕರೆಗೆ ಎನ್‌ಡಿಆರ್‌ಎಫ್ ಪರಿಹಾರ ಮಾನದಂಡದಡಿ ₹40 ಸಾವಿರ ಪರಿಹಾರ ಕೊಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ನ್ಯಾಮತಿ ತಾಲೂಕಿನ ಮಾದಾಪುರ, ಕೊಡತಾಳ್, ಮಾಚಿಗೊಂಡನಹಳ್ಳಿ, ಚಿನ್ನಿಕಟ್ಟೆ, ಯಲ್ಲಾಪುರ, ಬಿದರಹಳ್ಳಿ ಸೇರಿದಂತೆ ಹೊನ್ನಾಳಿ ತಾಲ್ಲೂಕಿನ ಬಸವನಹಳ್ಳಿ, ಅರಬಗಟ್ಟೆ, ಮಾದನಬಾವಿ ಸೇರಿದಂತೆ 40 ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಬರ ಸಂಕಷ್ಟವಿರುವ ಕಾರಣ ರಾಷ್ಠ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕುಗಳು ಬೆಳೆ ಸಾಲ ಮನ್ನಾ ಮಾಡಬೇಕು. ಪಕ್ಕದ ತಮಿಳುನಾಡು, ಮಹಾರಾಷ್ಠ್ರ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಇದೇ ರೀತಿ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡಬೇಕು. ರೈತರು ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಚಿನ್ನದ ಒಡವೆಗಳನ್ನು ಬ್ಯಾಂಕುಗಳಲ್ಲಿಟ್ಟು ಗಿರಿವಿ ಸಾಲ ಪಡೆದಿದ್ದಾರೆ. ಬರಗಾಲದ ಕಾರಣ ಅವರಿಗೆ ಬಡ್ಡಿ, ಮತ್ತು ಸಾಲ ಪಾವತಿ ಮಾಡಿ ಸಾಲ ನವೀಕರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಡ್ಡಿ ಕಟ್ಟಿಸಿಕೊಂಡು ರೈತರ ಸಾಲ ನವೀಕರಣ ಮಾಡಿಕೊಡುವಂತೆ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಕೂಡಲೇ ಆದೇಶ ಹೊರಡಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ, ಮುಖಂಡ ಹೊಳೆಹರಳಹಳ್ಳಿ ಬಸವರಾಜಪ್ಪ, ಗದ್ದಿಗೆಪ್ಪ ಉಪಸ್ಥಿತರಿದ್ದರು.- - -
(ಕೋಟ್) ಜಿಲ್ಲಾಧಿಕಾರಿಗಳು, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವವರೆಗೂ ಹೋರಾಟ ಮುಂದುವರೆಯಲಿದೆ. ಪತ್ರಿಕೆಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಅವರಿಗೆ ಮನವಿ ಮಾಡುತ್ತಿದ್ದೇವೆ.- ಎಂ.ಪಿ.ಕರಿಬಸಪ್ಪ ಗೌಡ, ರಾಜ್ಯಾಧ್ಯಕ್ಷ.
- - --24ಎಚ್.ಎಲ್.ಐ2:
ಹೊನ್ನಾಳಿಯಲ್ಲಿ ಜು.27ರಂದು ನಡೆಯಲಿರುವ ಎ.ಸಿ. ಕಚೇರಿ ಮುತ್ತಿಗೆ ಕಾರ್ಯಕ್ರಮ ಕುರಿತು ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ರೈತ ಸಂಘ, ಹಸಿರುಸೇನೆಯ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಮಾತನಾಡಿದರು.