ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರಲಿಂಗಾಯತ ಪಂಚಮಸಾಲಿ ಸಮಾಜದ ಬಹುದಿನಗಳ ಬೇಡಿಕೆಯಾಗಿರುವ 2 ಎ ಮೀಸಲಾತಿ ಬೇಡಿಕೆಯನ್ನು ಸರ್ಕಾರ ಚಳಿಗಾಲದ ಅಧಿವೇಶನದೊಳಗಾಗಿ ಈಡೇರಿಸಬೇಕು. ಈಡೇರಿಸದಿದ್ದರೆ ಪಂಚಮಸಾಲಿ ಸಮಾಜದ ನೇತೃತ್ವದಲ್ಲಿ ಡಿ.9ಕ್ಕೆ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ತಾಲೂಕಿನ ರೋಣಿಹಾಳದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಯುವಕ ಸಂಘ ಹಾಗೂ ಕೊಲ್ಹಾರ ತಾಲ್ಲೂಕು ಪಂಚಮಸಾಲಿ ಸಮಾಜ ಹಮ್ಮಿಕೊಂಡ ಕಿತ್ತೂರು ರಾಣಿ ಚನ್ನಮ್ಮನ 246 ನೇ ಜಯಂತ್ಯುತ್ಸವ ಹಾಗೂ 200 ನೇ ವಿಜಯೋತ್ಸವದಲ್ಲಿ ಚನ್ನಮ್ಮ ವೃತ್ತ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2ಎ ಮೀಸಲಾತಿ ಸಲುವಾಗಿ ನನ್ನ ಹಾಗೂ ಪಂಚಮಸಾಲಿ ಸಮಾಜದ ವಕೀಲರ ನಿಯೋಗದ ಜೊತೆ ಚರ್ಚಿಸಿದ್ದಾರೆ. ಆದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಉಪಚುನಾವಣೆಯ ನೀತಿ ಸಂಹಿತೆ ಸಬೂಬು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು 2ಎ ಮೀಸಲಾತಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಶಿವಕುಮಾರ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ಲಿಂಗಾಯತ ಮಠ ಮಾನ್ಯಗಳಿಗೆ ತೆರಳಿ 2ಎ ಮೀಸಲಾತಿ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಹೀಗಾಗಿ ನಾವು ಅವರನ್ನು ಬೆಂಬಲಿಸಿದ್ದೀವಿ, ಆದ್ಧರಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಅದನ್ನು ಅವರು ಮರೆಯಬಾರದು ಎಂದರು.ವೀರರಾಣಿ ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ದಿಟ್ಟ ಮಹಿಳೆ. ಹೀಗಾಗಿ ಅವರ ಜಯಂತಿ ಹಾಗೂ ವಿಜಯೋತ್ಸವವನ್ನು ಈ ಬಾರಿ ದೆಹಲಿ ಪಾರ್ಲಿಮೆಂಟ್‌ನಲ್ಲಿ ಪ್ರಧಾನ ಮಂತ್ರಿ ಮೋದಿಯವರು ಚನ್ನಮ್ಮಳ ಕಂಚಿನ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೊದಲ ಬಾರಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಬಾರಿ 200 ನೇ ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಕಿತ್ತೂರು ಸೇರಿದಂತೆ ನಾಡಿನ ತುಂಬೆಲ್ಲಾ ಬಹಳ ವಿಶೇಷವಾಗಿ ಆಚರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿತು. ರೋಣಿಹಾಳ ಕ್ರಾಸ್‌ನಿಂದ ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆವರೆಗೆ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಸಾರೋಟದಲ್ಲಿ ಮಹಿಳೆಯರ ಕುಂಭ, ಡೊಳ್ಳು ಕುಣಿತ ಹಾಗೂ ಸಕಲ ವಾದ್ಯವೈಭವಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ರೋಣಿಹಾಳದಲ್ಲಿ ನೂತನವಾಗಿ ಶ್ರೀಗಳಿಂದ ಚನ್ನಮ್ಮ ವೃತ್ತವನ್ನು ಉದ್ಘಾಟಿಸಲಾಯಿತು.ವೇ.ಮೂ.ರಾಜಶೇಖರಯ್ಯ ಹಿರೇಮಠ ಹಾಗೂ ವೇ.ಮೂ.ರಾಚೋಟಯ್ಯ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಎಲ್.ಐ.ರೂಡಗಿ, ಸದಾಶಿವ ಹಲಗಲಿ ವಹಿಸಿದ್ದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಉದ್ಘಾಟಿಸಿದರು. ಅತಿಥಿಗಳಾಗಿ ಸಿ.ಆರ್.ರೂಡಗಿ, ಡಿ.ಎಸ್.ಸಾವಳಗಿ, ಶ್ರೀಶೈಲ ಬುಕ್ಕಾನಿ, ಎ.ಎಸ್.ಪಾಟೀಲ, ಸುರೇಖಾ ಅಣ್ಣನೆವರ, ಚನ್ನಪ್ಪಗೌಡ ಬಿರಾದಾರ, ಮಲ್ಲು ದೇಸಾಯಿ ಬೀಳಗಿ, ಸಂಗಮೇಶ ಕುಬಕಡ್ಡಿ, ಶರಣುಸಾಹುಕಾರ ನ್ಯಾಮಗೌಡ್ರ, ಜಗದೀಶ ಸಾಲಳ್ಳಿ, ಉದಯಕುಮಾರ ಹಳ್ಳಿ, ಬಸವರಾಜ ಬೀಳಗಿ, ಶೇಖಪ್ಪ ಕಾಗಲ್, ನಾಗರಾಜ ಬೆಳ್ಳುಬ್ಬಿ ಮುತ್ತು ಮಮದಾಪೂರ, ಬಾಬು ಬೆಲ್ಲದ ಸೇರಿದಂತೆ ಕೊಲ್ಹಾರ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳ ಪಂಚಮಸಾಲಿ ಸಮಾಜದ ಗಣ್ಯರು, ಯುವಕರು, ಮಕ್ಕಳು ಉಪಸ್ಥಿತರಿದ್ದರು.ಕೋಟ್‌ಡಿ.9ಕ್ಕೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಬೃಹತ್ ಸಂಖ್ಯೆಯಲ್ಲಿ ಪಂಚಮಸಾಲಿ ಬಂಧುಗಳು ಆಗಮಿಸಬೇಕು. ಅಂದು ಟ್ರ್ಯಾಕ್ಟರ್ ರ್‍ಯಾಲಿಯ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಷ್ಟರೊಳಗೆ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಯನ್ನು ಘೋಷಿಸಬೇಕು. ಇಲ್ಲವೇ, ಅಧಿವೇಶನ ನಡೆಸದೆ ಮರಳಿ ಹೋಗಬೇಕು. ಸಮಾಜದ ವಕೀಲರ ನಿಯೋಗದ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣೆಯ ಸಬೂಬು ಹೇಳಿದ್ದಾರೆ.ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪೀಠ