10 ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ: ಕೂಡಲ ಶ್ರೀ

| Published : Dec 08 2024, 01:16 AM IST

10 ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ: ಕೂಡಲ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ. 10 ರಂದ ಬೆಳಗ್ಗೆ 10 ಗಂಟೆಗೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ. 10 ರಂದ ಬೆಳಗ್ಗೆ 10 ಗಂಟೆಗೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ನಮ್ಮ ಹೋರಾಟಕ್ಕೆ ಸಹಕಾರ,ಬೆಂಬಲ ನೀಡುತ್ತ ಬಂದಿತ್ತು.ಆದರೆ, ಕಾಂಗ್ರೆಸ್‌ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

2ಎ ಮೀಸಲಾತಿ ಸಂಬಂಧ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ನಮ್ಮ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಮೀಸಲಾತಿ ವಿಚಾರವಾಗಿ ಯಾವುದೇ ಭರವಸೆಯನ್ನೂ ಕೊಟ್ಟಿಲ್ಲ. ಲಿಂಗಾಯತ ಸಮಾಜವನ್ನು ಕೇಂದ್ರದ ಓಬಿಸಿ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿಲ್ಲ. ಸರ್ಕಾರ ಅಸಡ್ಡೆ, ನಿರ್ಲಕ್ಷ್ಯ ಧೋರಣೆ ವಿರುದ್ಧ ನಾವು ಹೋರಾಟ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯ ವಕೀಲರ ಪರಿಷತ್ತಿನ 5 ಸಾವಿರ ವಕೀಲರು, ಟ್ರ್ಯಾಕ್ಟರ್‌ ಸಮೇತವಾಗಿ 5 ಸಾವಿರ ರೈತರು ಸೇರಿದಂತೆ ಸಮಾಜದ ಲಕ್ಷಾಂತರ ಜನರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ಹಕ್ಕನ್ನು ಮಂಡಿಸುತ್ತೇವೆ. ರಾಜ್ಯಾದ್ಯಂತ ಸಮಾಜದ ಜನರು ತಾವೇ ಸ್ವಯಂ ಸ್ಫೂರ್ತಿಯಿಂದ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಮ್ಮ ಹೋರಾಟದಲ್ಲಿ ಸಮಾಜದ ಜನಪ್ರತಿನಿಧಿಗಳು ಭಾಗವಹಿಸಬೇಕು ಎಂದು ಹೇಳಿದರು.ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ, ಕಾಂಗ್ರೆಸ್‌ ಪಕ್ಷಕ್ಕೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದೆ. ನಮ್ಮ ಹೋರಾಟಗಾರರಿಗೆ, ನಾಯಕರಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದಾಗಿನಿಂದಲೂ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನಮ್ಮ ಸಮಾಜದ ಮೀಸಲಾತಿ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಂತಿಯುತವಾಗಿ, ಮೌನವಾಗಿ ನಾವು ಹೋರಾಟ ಮಾಡುತ್ತೇವೆ ಎಂದವರು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಸಂಬಂಧ ಅಧಿವೇಶನಕ್ಕೆ ಮುಂಚೆಯೇ ಹಿಂದುಳಿದ ಆಯೋಗದ ವರದಿ ತರಿಸಿಕೊಂಡು, ಸ್ಪಷ್ಟ ಮಾಹಿತಿ ನೀಡಿ, ಗೆಜೆಟ್ ನೋಟಿಫಿಕೇಶನ್‌ ಪ್ರಕಟಿಸಬೇಕು. ಮೀಸಲಾತಿ ಕೊಡದಿದ್ದರೆ ಹೋರಾಟ ಅನಿವಾರ್ಯ ಎಂದರು.

ಸಮಾಜದ ಹೋರಾಟಕ್ಕೆ ಪ್ರತಿ ಹಂತದಲ್ಲಿಯೂ ನಮ್ಮ ಹಿಂದಿನ ಬಿಜೆಪಿ ಸರ್ಕಾರ ಬೆಂಬಲ, ಸಹಕಾರ ನೀಡಿತ್ತು. ಆದರೆ, ಶ್ರೀಗಳ ನಡೆಯಿಂದ ಸರ್ಕಾರಕ್ಕೆ ಮುಜುಗುರ ಆಗುತ್ತದೆ ಎಂದು ಕೆಲವರು ಹಿತವಚನ ಹೇಳಲು ಪ್ರಾರಂಭಿಸಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಏನಾದರೂ ಅನಾಹುತವಾದರೆ ಸರ್ಕಾರಕ್ಕೆ ಕಳಂಕ ಬರುತ್ತದೆ. ನಮ್ಮ ಸಮಾಜದ ಶ್ರೀಗಳ ಜೊತೆಗೆ ಸಂಧಾನ ಸಭೆ ಮಾಡಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಅಷ್ಟೇ ಬೇಕು. ಸಿಎಂ ಸಿದ್ದರಾಮಯ್ಯನವರ ಹಾದಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಹೋರಾಟ ಮಾಡದಂತೆ ನಮ್ಮ ಸಮಾಜದ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು, ಪದಾಧಿಕಾರಿಗಳ, ನಾಯಕರ ಮೇಲೆ ಪೊಲೀಸರ ಮೂಲಕ ಒತ್ತಡ, ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.