ಕಾರ್ಯಕ್ರಮದಲ್ಲಿ ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಭದ್ರಾವತಿಯ ಬಿಳಕಿ ಹಿರೇಮಠದ ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ಯೋಗೀಶ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆಧುನಿಕ ಸಮಾಜದಲ್ಲಿ ಮೌಲ್ಯಗಳು ಮತ್ತು ಸಂಸ್ಕಾರಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಜನರಿಗೆ ಧಾರ್ಮಿಕ ಮಾರ್ಗದರ್ಶನ ನೀಡುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಮಹತ್ತರ ಕಾರ್ಯವನ್ನು ಧಾರ್ಮಿಕ ಮಠಗಳು ನಿರಂತರವಾಗಿ ಮಾಡುತ್ತಿವೆ ಎಂದು ದೊಡ್ಡ ಮೇಟಿಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತಮಠದ ಆವರಣದಲ್ಲಿ ಆಯೋಜಿಸಿದ್ದ ಸಿದ್ದಬಸವ ಶಿವಯೋಗಿಗಳ 68ನೇ, ಶಾಂತವೀರ ಸ್ವಾಮೀಜಿಯವರ 28ನೇ ಹಾಗೂ ರಾಜಶೇಖರ ಸ್ವಾಮೀಜಿಯವರ 11ನೇ ವರ್ಷದ ಪುಣ್ಯಸ್ಮರಣೋತ್ಸವದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನ ಬದುಕಿನಲ್ಲಿ ಪಾಂಡಿತ್ಯದ ಜತೆಗೆ ವಿವೇಚನೆ, ತಾಳ್ಮೆ ಹಾಗೂ ಸಂಸ್ಕಾರ ಅತ್ಯಂತ ಅಗತ್ಯ. ಪರೋಪಕಾರ ಮತ್ತು ಸಹಕಾರ ಮನೋಭಾವದಿಂದ ಬದುಕಿದಾಗ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಅಹಂಕಾರವನ್ನು ಬದಿಗಿಟ್ಟು ಎಲ್ಲರನ್ನೂ ನಮ್ಮವರೆಂದು ಭಾವಿಸಿ ಬದುಕುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಕಡೂರು ತಾಲೂಕಿನ ಯಳನಡು ಮಹಾಸಂಸ್ಥಾನದ ಪೀಠಾಧಿಪತಿ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ವಿದ್ಯಾಭ್ಯಾಸ, ನಡವಳಿಕೆ ಹಾಗೂ ಸಂಸ್ಕಾರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಲವೊಮ್ಮೆ ಅಹಿತಕರ ಘಟನೆಗಳಿಗೂ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಊಟ ಮಾಡಿಸುವಾಗಲೂ ನೀತಿಕಥೆಗಳನ್ನು ಹೇಳುವ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತಿದ್ದರು. ಆದರೆ ಇಂದು ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ನಿಗಾ ವಹಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೊಬೈಲ್ ಬಳಕೆಗೆ ಮಿತಿ ವಿಧಿಸಿ, ಅವರ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಭಾರತ ಸರ್ಕಾರದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಚ್.ಜಿ. ದರ್ಶನ್ ಕುಮಾರ್ ಅವರು ಮಠದಿಂದ ಪ್ರದಾನ ಮಾಡಲಾದ '''' ಆಡಳಿತ ಸೇವಾ ರತ್ನ'''' ಗೌರವ ಸ್ವೀಕರಿಸಿ ಮಾತನಾಡಿ, ಸೋಲು ಎಂಬುದು ಗೆಲುವಿನ ಮೆಟ್ಟಿಲಾಗಬೇಕು. ಒಂದು ಪ್ರಯತ್ನದಲ್ಲಿ ವಿಫಲರಾದ ಮಾತ್ರಕ್ಕೆ ಗುರಿ ತಲುಪುವ ಪ್ರಯತ್ನವನ್ನು ಕೈಬಿಡಬಾರದು. ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ನಾನು ಮೊದಲ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಕಾಣದಿದ್ದರೂ, ಮತ್ತೆ ಮತ್ತೆ ಪ್ರಯತ್ನಿಸಿದ್ದರಿಂದ ಗುರಿ ತಲುಪಲು ಸಾಧ್ಯವಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಸೋಲಿಗೆ ಹೆದರದೆ ನಿರಂತರ ಅಧ್ಯಯನ ಮಾಡಬೇಕು. ಕರ್ನಾಟಕದ ಶೈಕ್ಷಣಿಕ ಪ್ರಗತಿಯಲ್ಲಿ ಧಾರ್ಮಿಕ ಮಠಗಳ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಶ್ರಮಪಟ್ಟು ಅಭ್ಯಾಸ ಮಾಡುವ ಮೂಲಕ ತಂದೆ- ತಾಯಿ ಹಾಗೂ ಗುರು- ಹಿರಿಯರ ಕನಸು ನನಸು ಮಾಡಬೇಕು ಎಂದು ಹೇಳಿದರು.

ನಗರದ ಸಾವಿತ್ರಮ್ಮ ಷಣಸಪ್ಪ ಆಸ್ಪತ್ರೆಯ ವೈದ್ಯ ಡಾ. ಶಿವಕುಮಾರ್ ಅವರಿಗೆ ಮಠದ ವತಿಯಿಂದ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಭದ್ರಾವತಿಯ ಬಿಳಕಿ ಹಿರೇಮಠದ ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ಯೋಗೀಶ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.

ಪುಣ್ಯಸ್ಮರಣೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಾಡಾಳು ಶಿವಬಸವ ಕುಮಾರಾಶ್ರಮದ ಅಭಿನವ ಶಿವಲಿಂಗ ಸ್ವಾಮೀಜಿ, ಉದ್ಯಮಿ ಕೆ.ವಿ.ಎನ್. ಶಿವು, ವಿವಿಧ ಮಠಗಳ ಮಠಾಧೀಶರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.