ಎಂಆರ್‌ಪಿಎಲ್‌ಗೆ 2,072 ಕೋಟಿ ಅರ್ಧವಾರ್ಷಿಕ ಲಾಭ

| Published : Nov 02 2023, 01:02 AM IST

ಸಾರಾಂಶ

ಎಂಆರ್ರ್‌ಪಿಎಲ್ಲ್‌ಗೆ ೨,೦೭೨ ಕೋಟಿ ರು. ಅರ್ಧವಾರ್ಷಿಕ ಲಾಭ
ಕನ್ನಡಪ್ರಭ ವಾರ್ತೆ ಮಂಗಳೂರು ಒಎನ್‌ಜಿಸಿಯ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌)ಗೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಅರ್ಧ ವಾರ್ಷಿಕ ತೆರಿಗೆ ನಂತರದ ಲಾಭದಲ್ಲಿ ಗಮನಾರ್ಹ ಏರಿಕೆಯಾಗಿದ್ದು, 2,072 ಕೋಟಿ ರು. ತೆರಿಗೆ ನಂತರದ ಲಾಭ ಪಡೆದಿದೆ. ಕಳೆದ ವರ್ಷದ ಪ್ರಥಮ ಅರ್ಧ ವಾರ್ಷಿಕ ಆದಾಯ 918 ಕೋಟಿ ರು. ಆಗಿತ್ತು. ಪ್ರಸ್ತುತ ಹಣಕಾಸು ವರ್ಷದ ಈ ಅವಧಿಯಲ್ಲಿ ವಿವಿಧ ಕಾರ್ಯ ನಿರ್ವಹಣೆಯ ಆದಾಯ 47,676 ಕೋಟಿ ರು. ಆಗಿದ್ದರೆ, ತೆರಿಗೆಗೆ ಮುಂಚಿನ ಲಾಭ 3,164 ಕೋಟಿ ರು., ತೆರಿಗೆಯ ನಂತರದ ಲಾಭ 2,072 ಕೋಟಿ ರು. ಆಗಿದೆ. ಸಾಲದ ಇಕ್ವಿಟಿ ಅನುಪಾತವು ಸೆಪ್ಟೆಂಬರ್‌ 2022 (2.24)ಕ್ಕಿಂತ ಈ ಬಾರಿ ಸುಧಾರಣೆ ಕಂಡಿದ್ದು, 1.17 ದಾಖಲಿಸಿದೆ. ಸೆಪ್ಟೆಂಬರ್‌ ಅಂತ್ಯಕ್ಕೆ ಕೊನೆಗೊಂಡ ಈ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಎಂಆರ್‌ಪಿಎಲ್‌ 1,059 ಕೋಟಿ ರು. ತೆರಿಗೆ ನಂತರದ ಲಾಭ ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 1,789 ತೆರಿಗೆ ನಂತರದ ನಷ್ಟ ಅನುಭವಿಸಿತ್ತು. ಈ ಅವಧಿಯಲ್ಲಿ ವಿವಿಧ ಕಾರ್ಯ ನಿರ್ವಹಣೆಗಳಿಂದ 22,844 ಕೋಟಿ ರು. ಗಳಿಸಿದ್ದರೆ, ತೆರಿಗೆಗೆ ಮುಂಚಿನ ಲಾಭ 1,606 ಕೋಟಿ ರು. ಆಗಿದೆ. ಎಂಆರ್‌ಪಿಎಲ್‌ ತನ್ನ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸಲು ಉದ್ದೇಶಿಸಿದೆ. ಮಾತ್ರವಲ್ಲದೆ ಮುಂದಿನ 3ರಿಂದ 5 ವರ್ಷಗಳ ಅವಧಿಯಲ್ಲಿ 1 ಎಂಎಂಟಿ ಸೇಲ್ಸ್‌ ಗುರಿಯನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.