- ಸಾಗರ ಭಾಗದ ಷೇರುದಾರರ ಸಮಾಲೋಚನಾ ಸಭೆ । ₹೧,೬೩೬ ಕೋಟಿ ವಹಿವಾಟು, ₹೯.೫೨ ಕೋಟಿ ನಿವ್ವಳ ಲಾಭ
- - -ಕನ್ನಡಪ್ರಭ ವಾರ್ತೆ ಸಾಗರ
ಇತ್ತೀಚೆಗೆ ಅಡಕೆ ಗುಣಮಟ್ಟ ಕಡಿಮೆ ಆಗುತ್ತಿರುವ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಅಡಕೆ ಧಾರಣೆ ಕುಸಿದಿದೆ. ಅಲ್ಲದೇ, ಮಹಾರಾಷ್ಟ್ರದ ಮೂಲಕ ಸಾಗಾಣಿಕೆ ಆಗುತ್ತಿದ್ದ ಅಂದಾಜು ೫೦ ಲೋಡು ಅಡಕೆಯನ್ನು ಅಲ್ಲಿನ ಅಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿರುವುದು ಸಹ ಅಡಕೆ ಧಾರಣೆ ಕುಸಿತಕ್ಕೆ ಕಾರಣವಾಯಿತು. ಆದರೆ, ಸತತ ಪ್ರಯತ್ನದಿಂದ ಸೀಜ್ ಆದ ಅಡಕೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದೆವು ಎಂದು ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಹೇಳಿದರು.ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಮ್ಯಾಮ್ಕೋಸ್ ಸಂಸ್ಥೆ ಆಯೋಜಿಸಿದ್ದ ಸಾಗರ ಭಾಗದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಸ್ಥೆ ಕಳೆದ ಸಾಲಿನಲ್ಲಿ ₹೧,೬೩೬ ಕೋಟಿ ವಹಿವಾಟು ನಡೆಸಿ ₹೯.೫೨ ಕೋಟಿ ನಿವ್ವಳ ಲಾಭ ಗಳಿಸಿದೆ. ವಹಿವಾಟು ಕಳೆದ ಸಾಲಿಗೆ ಹೋಲಿಸಿದರೆ ೩೮೦ ರು. ಕೋಟಿ ಹೆಚ್ಚಳವಾಗಿದೆ. ಸ್ಥಾಪನೆಯ ಸಂದರ್ಭದಲ್ಲಿ ಕೇವಲ ೬೨೯ ಸದಸ್ಯರು, ೫,೧೨೧ ಅಡಕೆ ಮೂಟೆಗಳ ವಹಿವಾಟು ಹಾಗೂ ೧೬,೦೩೧ ರು. ಶೇರು ಬಂಡವಾಳದೊಂದಿಗೆ ಆರಂಭಗೊಂಡ ಸಂಸ್ಥೆ, ಮೊದಲ ವರ್ಷವೇ ಲಾಭ ಗಳಿಸಿ ಶೇ. ೬.೨೫ ಡಿವಿಡೆಂಡ್ ನೀಡಿತ್ತು. ಪ್ರಸ್ತುತ ೩೧,೮೫೦ ಸದಸ್ಯರನ್ನು ಹೊಂದಿರುವ ಸಂಸ್ಥೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆ ಸೇರಿ ಒಟ್ಟು ೧೭ ತಾಲೂಕುಗಳಲ್ಲಿ ೧೩ ಶಾಖಾ ಕೇಂದ್ರ, ೧೬ ಅಡಕೆ ಸಂಗ್ರಹಣಾ ಏಜೆನ್ಸಿಗಳನ್ನು ಹೊಂದಿದೆ ಎಂದರು.
ಸದಸ್ಯರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಗುಂಪು ವಿಮಾ ಅಭಿರಕ್ಷೆ ಯೋಜನೆಯಡಿ ಸದಸ್ಯರು, ಅವರ ಕುಟುಂಬದವರು ಹಾಗೂ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಮೃತರ ಪರಿಹಾರ ಮೊತ್ತವನ್ನು ₹೬ ಲಕ್ಷದಿಂದ ₹೭ ಲಕ್ಷಕ್ಕೆ ಹಾಗೂ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ₹೧.೫೦ ಲಕ್ಷದಿಂದ ₹೨ ಲಕ್ಷಕ್ಕೆ ಹೆಚ್ಚಿಸಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಈ ಯೋಜನೆಯಡಿ ೭೬ ಪ್ರಕರಣಗಳಿಗೆ ಒಟ್ಟು ₹೭೭.೭೮ ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಬರುವೆ, ನಿರ್ದೇಶಕರಾದ ನಂದನ್ ಎಚ್.ಸಿ., ನರೇಂದ್ರ ಬಿ.ಸಿ., ಕುಬೇಂದ್ರಪ್ಪ ಎಂ., ಕೃಷ್ಣಮೂರ್ತಿ ಕೆ.ವಿ., ಧಮೇಂದ್ರ ಎಚ್., ರತ್ನಾಕರ ಕೆ. ಯಾನೆ ಧರ್ಮಣ್ಣ, ಸುರೇಶ್ ಚಂದ್ರ ಎ., ಸತೀಶ್ ಎನ್., ಟಿ.ಎಲ್. ರಮೇಶ್, ವೀರೇಶ್ ಯು.ವಿ., ಜಯ ಕೆ.ಕೆ., ಸಹನಾ ಸುಭಾಷ್, ವೃತ್ತಿಪರ ನಿರ್ದೇಶಕರಾದ ಸುಬ್ರಮ್ಮಣ್ಯ ವೈ.ಎಸ್., ಚನ್ನವೀರಪ್ಪ ಇದ್ದರು.
ಸಹಕಾರಿ ಪ್ರಮುಖರಾದ ಎಲ್.ಟಿ.ತಿಮ್ಮಪ್ಪ, ಬಿ.ಎಚ್.ರಾಘವೇಂದ್ರ, ಆರ್.ಎಸ್.ಗಿರಿ, ಶಶಿಧರ ಹರತಾಳು, ಪಿ.ಎನ್. ಸುಬ್ಬರಾವ್, ಪ್ರಭಾವತಿ ಶ್ರೀಧರ್ ಇತರರು ಪಾಲ್ಗೊಂಡಿದ್ದರು. ಭರ್ಮಪ್ಪ ಅಂದಾಸುರ ಸ್ವಾಗತಿಸಿದರು. ಕೀರ್ತಿರಾಜ್ ಕಾನಳ್ಳಿ ನಿರೂಪಿಸಿದರು.- - -
(ಕೋಟ್)* ಸೀಜ್ ಅಡಕೆ ಪಡೆಯುವಲ್ಲಿ ಯಶಸ್ವಿ ಮಹಾರಾಷ್ಟ್ರದಲ್ಲಿ ಸೀಜ್ ಆದ ಅಡಕೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಹಂತದಲ್ಲಿ ಟೆಂಡರ್ ನೀಡುವವರ ಸಂಖ್ಯೆಯೇ ಕಡಿಮೆಯಾಗಿತ್ತು. ಮ್ಯಾಮ್ಕೋಸ್, ಕ್ಯಾಂಪ್ಕೋ ಸೇರಿದಂತೆ ಅಡಕೆ ಪರ ಸಂಸ್ಥೆಗಳು ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಹಾರಾಷ್ಟ್ರದ ಸಿಎಂ ಫಡ್ನವೀಸ್ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಅವರೊಂದಿಗೆ ತಂಡವಾಗಿ ಹೋರಾಟ ಮಾಡಿದಾಗ ಸೀಜ್ ಆದ ಅಡಕೆಗೆ ಮುಕ್ತಿ ಸಿಕ್ಕಿತು.
- ಮಹೇಶ್ ಹುಲ್ಕುಳಿ, ಉಪಾಧ್ಯಕ್ಷ.- - -
-೨೫ಕೆ.ಎಸ್.ಎ.ಜಿ.೧: ಸಾಗರದ ಬ್ರಾಸಂ ಸಭಾಭವನದಲ್ಲಿ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಲಾಯಿತು.