ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹರಿವು ಗಮನಾರ್ಹ ಹೆಚ್ಚಳ

| Published : Jun 25 2024, 12:36 AM IST

ಸಾರಾಂಶ

ಸುಬ್ರಹ್ಮಣ್ಯ ಪರಿಸರದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯ ನೀರಿನ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುವ ಸಮಯದಲ್ಲಿ ನೇತ್ರಾವತಿ ನದಿಯ ನೀರನ್ನು ತಡೆಗಟ್ಟಿದಂತೆ ಮುನ್ನುಗ್ಗಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಮುಂಗಾರು ಬಿರುಸು ಪಡೆಯುತ್ತಿದ್ದಂತೆಯೇ ದ.ಕ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದ್ದು, ಸಮುದ್ರ ಮಟ್ಟಕ್ಕಿಂತ ೨೪.೫ ಮೀಟರ್ ಎತ್ತರದಲ್ಲಿ ನೀರಿನ ಹರಿವು ದಾಖಲಾಗಿದೆ.

ಸುಬ್ರಹ್ಮಣ್ಯ ಪರಿಸರದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯ ನೀರಿನ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುವ ಸಮಯದಲ್ಲಿ ನೇತ್ರಾವತಿ ನದಿಯ ನೀರನ್ನು ತಡೆಗಟ್ಟಿದಂತೆ ಮುನ್ನುಗ್ಗಿ ಹರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರವೂ ಮಳೆ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜೂ.25ರಂದು ಕರಾವಳಿಗೆ ಸಾಮಾನ್ಯ ಮಳೆ ನಿರೀಕ್ಷೆಯ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಜಿಲ್ಲೆಯ ಬಹುತೇಕ ಕಡೆ ಸೋಮವಾರ ಬೆಳಗ್ಗೆ ಉತ್ತಮ ಮಳೆಯಾಗಿದ್ದು, ನಂತರ ಮೋಡ ಕವಿದ ವಾತಾವರಣ, ಮಂಗಳೂರು ಸೇರಿದಂತೆ ಅನೇಕ ಭಾಗಗಳಲ್ಲಿ ಬಿಸಿಲು ಕಂಡುಬಂದಿತ್ತು. ಮಧ್ಯಾಹ್ನ ನಂತರ ದಿಢೀರನೆ ಮೋಡ ಕವಿದು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸುಮಾರು ಅರ್ಧ ಗಂಟೆ ಬಿರುಗಾಳಿ ಮಳೆ ಸುರಿದು ಮತ್ತೆ ಮಳೆ ನಿಶ್ಚಲವಾಯಿತು. ರಾತ್ರಿ ವೇಳೆ ಅಲ್ಲಲ್ಲಿ ಮಳೆಯಾಗಿದೆ.ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಮಂಗಳೂರಿನಲ್ಲಿ 23.8 ಮಿಮೀ, ಮೂಲ್ಕಿ 23.8 ಮಿ.ಮೀ., ಬೆಳ್ತಂಗಡಿ 21.2 ಮಿ.ಮೀ, ಬಂಟ್ವಾಳ 23.2 ಮಿ.ಮೀ, ಪುತ್ತೂರು 20.1 ಮಿ.ಮೀ, ಸುಳ್ಯ 21.1 ಮಿ.ಮೀ, ಮೂಡುಬಿದಿರೆ 20.1 ಮಿ.ಮೀ, ಕಡಬ 20.6 ಮಿ.ಮೀ, ಉಳ್ಳಾಲ 20.1 ಮಿ.ಮೀ. ಮಳೆ ದಾಖಲಾಗಿದೆ.