ನೇಹಾ ಕೊಲೆಯ ನ್ಯಾಯಕ್ಕಾಗಿ ಮುಸ್ಲಿಂ ಸಮುದಾಯದಿಂದ ಮೌನ ಮೆರವಣಿಗೆ

| Published : Apr 22 2024, 02:03 AM IST

ನೇಹಾ ಕೊಲೆಯ ನ್ಯಾಯಕ್ಕಾಗಿ ಮುಸ್ಲಿಂ ಸಮುದಾಯದಿಂದ ಮೌನ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಕೊಲೆಯು ನಾಡಿನ ಮುಸ್ಲಿಂ ಸಮುದಾಯಕ್ಕೂ ಬಹಳ ನೋವು ತಂದಿದೆ. ಕ್ರೂರಿ ಫಯಾಜ್‌ ಮಾಡಿರುವ ಕೃತ್ಯದಿಂದ ಇಡೀ ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತಾಗಿದೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ಗೆ ಶೀಘ್ರ ಕಠಿಣ ಶಿಕ್ಷೆ ಕೊಡಿಸಿ, ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ಧಾರವಾಡದ ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಮೌನ ಮೆರವಣಿಗೆ ಮಾಡಲು ಧಾರವಾಡದ ಅಂಜುಮನ್‌ ಏ-ಇಸ್ಲಾಂ ಸಂಸ್ಥೆ ತೀರ್ಮಾನಿಸಿದೆ.

ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ, ನೇಹಾ ಕೊಲೆಯು ನಾಡಿನ ಮುಸ್ಲಿಂ ಸಮುದಾಯಕ್ಕೂ ಬಹಳ ನೋವು ತಂದಿದೆ. ಕ್ರೂರಿ ಫಯಾಜ್‌ ಮಾಡಿರುವ ಕೃತ್ಯದಿಂದ ಇಡೀ ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತಾಗಿದೆ. ಇನ್ಮುಂದೆ ಇಂತಹ ಕೃತ್ಯಗಳು ಮರುಕಳುಹಿಸದಂತೆ ಎಚ್ಚರ ವಹಿಸುವ ಉದ್ದೇಶದಿಂದ ಏ. 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಮುಸ್ಲಿಂ ಸಮುದಾಯದಿಂದ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗುವುದು. ಸಮಸ್ತ ಮುಸ್ಲಿಂ ಬಂಧುಗಳು, ಮೊಹಲ್ಲಾ ಮಸೀದಿ ಮೌಲ್ವಿ, ಮುತವಲ್ಲಿಗಳು ಭಾಗವಹಿಸಲಿದ್ದಾರೆ. ಆನಂತರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆರೋಪಿಗೆ ಶೀಘ್ರ ಶಿಕ್ಷೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಇಸ್ಲಾಂ ಧರ್ಮದಲ್ಲಿ ಹತ್ಯೆ ಮಾಡುವ ಹಕ್ಕಿಲ್ಲ. ಪ್ರೀತಿಯ ನೆಪದಲ್ಲಿ ನೇಹಾಳನ್ನು ಹತ್ಯೆ ಮಾಡಿದ್ದು ಘೋರ ಅಪರಾಧ. ಇಂತಹ ಘಟನೆಗಳು ಪದೇ ಪದೇ ಸಂಭವಿಸದಂತೆ ಇನ್ಮುಂದೆ ಎಚ್ಚರಿಕೆ ವಹಿಸುವ ಕಾರ್ಯವಾಗಬೇಕಿದೆ. ಯುವಕರು ಡ್ರಗ್ಸ್‌ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಶೆಯಲ್ಲಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಇಡೀ ಸಮಾಜ ಖಂಡಿಸಬೇಕು. ಜತೆಗೆ ಮುಸ್ಲಿಂ ಸಮಾಜ ಮಾಡುತ್ತಿರುವ ಈ ಪ್ರತಿಭಟನೆಯು ಇಡೀ ಯುವ ಜನಾಂಗಕ್ಕೆ ಸಂದೇಶವಾಗಬೇಕು ಎಂದ ಅವರು, ಅಂಜುಮನ್‌ ಇಸ್ಲಾಂ ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಇಂತಹ ಅಪರಾಧಗಳು ಆಗದಂತೆ ಸಿಸಿ ಕ್ಯಾಮೆರಾ, ಕಾವಲುಗಾರರ ನೇಮಿಸಿ ಎಚ್ಚರ ವಹಿಸಲಾಗುವುದು ಎಂದು ತಮಟಗಾರ ಹೇಳಿದರು.

ಕೊಠಡಿಗೆ ನೇಹಾ ಹೆಸರು

ಫಯಾಜ್‌ನಿಂದ ಕೊಲೆಯಾದ ನೇಹಾ ಹೆಸರಿನಲ್ಲಿ ಅಂಜುಮನ್‌ ಶಿಕ್ಷಣ ಸಂಸ್ಥೆಯ ಕಾಲೇಜಿನ ಕೊಠಡಿಗೆ ಹೆಸರಿಡಲು ಸಂಸ್ಥೆಯು ತೀರ್ಮಾನಿಸಿದ್ದು, ಅವರ ಪಾಲಕರು ಈ ಕೊಠಡಿ ಉದ್ಘಾಟಿಸುವರು ಎಂದರು.

ನೇಹಾ ಕೊಲೆ ಘಟನೆ ನಂತರ ಜಸ್ಟಿಸ್‌ ಫಾರ್‌ ಲವ್‌ ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್‌ ಇಟ್ಟುಕೊಂಡ ಧಾರವಾಡದ ಮುಸ್ಲಿಂ ಸಮುದಾಯದ ಯುವಕರಿಬ್ಬರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಮಟಗಾರ, ಯಾವುದೇ ಸಮಾಜದಲ್ಲಿ ಕೆಲವು ಹುಳುಗಳು ಇರುತ್ತವೆ. ಸದ್ಯ ಇಡೀ ಸಮುದಾಯದ ದೃಷ್ಟಿಯಿಂದ ಸಂಸ್ಥೆಯ ಕಾರ್ಯ ಮಾಡುತ್ತಿದೆ. ವೈಯಕ್ತಿಕ ತಪ್ಪುಗಳಿಗೆ ಸಂಸ್ಥೆಯು ಜವಾಬ್ದಾರಿ ಆಗಲಾರದು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿದ್ದಾರೆ ಎಂದರು.