ರೇವಣ್ಣ ಬಂಧನ: ಹೊಳೆನರಸೀಪುರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಮೌನ ಮೆರವಣಿಗೆ

| Published : May 06 2024, 12:31 AM IST / Updated: May 06 2024, 12:32 AM IST

ರೇವಣ್ಣ ಬಂಧನ: ಹೊಳೆನರಸೀಪುರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಮೌನ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಎಚ್‌.ಡಿ. ರೇವಣ್ಣ ಅವರ ಬಂಧನದ ನಂತರ ಪಟಾಕಿ ಸಿಡಿಸಿದ್ದರಿಂದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಭಾನುವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಹಸೀಲ್ದಾರ್‌ಗೆ ಮನವಿ । ಅಹಿತಕರ ಘಟನೆ ನಡೆಯದಂತೆ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶಾಸಕ ಎಚ್.ಡಿ.ರೇವಣ್ಣ ಪ್ರಕರಣ ಒಂದರ ಸಂಬಂಧ ಬೆಂಗಳೂರಿನಲ್ಲಿ ಶನಿವಾರ ಸಂಜೆ ಬಂಧನಕ್ಕೆ ಒಳಾಗಾದ ಹಿನ್ನೆಲೆ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿದ್ದರಿಂದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಭಾನುವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮೈಸೂರು ಜಿಲ್ಲೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರ ಪುತ್ರ ತನ್ನ ತಾಯಿಯ ಅಪಹರಣವಾಗಿದೆ ಎಂದು ಶಾಸಕ ರೇವಣ್ಣ ಹಾಗೂ ಇನ್ನೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಶಾಸಕ ರೇವಣ್ಣ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿದ್ದರು.

ಶಾಸಕ ರೇವಣ್ಣ ಬಂಧನವಾಗುತ್ತಿದ್ದಂತೆ, ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ವೃತ್ತದಲ್ಲಿ ಶನಿವಾರ ಸಂಜೆ ಕೆಲವು ವ್ಯಕ್ತಿಗಳು ಪಟಾಕಿ ಸಿಡಿಸಿದ್ದರು. ಇದರ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ಕಾರ್ಯಕರ್ತರು ಮಹಾತ್ಮಗಾಂಧಿ ವೃತ್ತದಿಂದ ಮೌನ ಮೆರೆವಣಿಗೆ ಮೂಲಕ ಸಾಗಿ ತಹಸೀಲ್ದಾರ್ ಪ್ರವೀಣ್ ಕುಮಾರ್ ಪಿ.ಎಸ್. ಅವರಿಗೆ ಮನವಿ ಪತ್ರ ನೀಡಿದರು.

ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ನೇತೃತ್ವದಲ್ಲಿ ನೀಡಿದ ಮನವಿ ಪತ್ರದಲ್ಲಿ, ‘ಎಸ್‌ಐಟಿ ಕ್ರಮದ ವಿಷಯಕ್ಕೆ ಸಂಬಂಧಿಸಿದಂತೆ ಮೇ ೪ ರಂದು ನ್ಯಾಯಾಲಯದ ತೀರ್ಪು ಹೊರ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮನವಿಯನ್ನು ಸಲ್ಲಿಸಲಾಗಿದೆ’ ಎಂದು ಅಧ್ಯಕ್ಷ ಹಾಗೂ ಕಾರ್ಯಕರ್ತರು ಸಹಿ ಮಾಡಿದ ಮನವಿ ಪತ್ರ ನೀಡಿದರು. ಮನವಿ ಪತ್ರ ಸಲ್ಲಿಸುವಾಗ ಪುರಸಭೆ ಸದಸ್ಯರಾದ ಎಚ್.ಕೆ.ಪ್ರಸನ್ನ, ಮಧು, ಶಿವಣ್ಣ, ವಾಸಿಂ ಹಾಗೂ ಶಬ್ಬೀರ್ ಹುಸೇನ್, ಜಿಪಂ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಮುಖಂಡರಾದ ರಘು, ಡಿಶ್ ಗೋವಿಂದ, ಜವರೇಶ್, ಸುನೀಲ್, ಇದ್ದರು.

ಇನ್‌ಸ್ಪೆಕ್ಟರ್ ಜನರಲ್ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಎಂ.ಎಸ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಪಟ್ಟಣಕ್ಕೆ ಆಗಮಿಸಿ, ಡಿವೈಎಸ್ಪಿ ಅಶೋಕ್ ಅವರ ಜತೆಯಲ್ಲಿ ಚರ್ಚಿಸಿದರು. ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ನಗರ ಪೊಲೀಸ್ ಠಾಣೆ ಪಿಎಸ್ಸೈ ಅಜಯ್ ಕುಮಾರ್ ಹಾಗೂ ಹಳ್ಳಿಮೈಸೂರು ಪಿಎಸ್ಸೈ ಸಲ್ಮಾನ್‌ಖಾನ್ ತಂಬುಳಿ, ಪಟ್ಟಣದ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಪಿಎಸ್ಸೈ ಅರುಣ್ ಹಾಗೂ ವಿನಯ್ ಕುಮಾರ್ ಇದ್ದರು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಮುಂಜಾಗ್ರತೆ ಕ್ರಮವಾಗಿ ಮೀಸಲು ಪೊಲೀಸ್ ಪಡೆಗಳನ್ನು ನೇಮಿಸಿ, ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.