ಸಾರಾಂಶ
ಬೆಂಗಳೂರು : ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಗ್ರೀನ್‌ಪೀಸ್ ಇಂಡಿಯಾದ ಕಾರ್ಯಕರ್ತೆಯರು ಮೆಟ್ರೋ ರೈಲಿನ ಒಳಗಡೆ ‘ಬೆಲೆ ಏರಿಕೆಯಿಂದ ಅಸಮಾನತೆ ಏರಿಕೆ’ ಭಿತ್ತಿಪತ್ರ ಪ್ರದರ್ಶಿಸಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಜ್ಞಾನಭಾರತಿ ಮೆಟ್ರೊ ನಿಲ್ದಾಣದಲ್ಲಿ ಮೆಟ್ರೋ ಏರಿದ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಇಳಿಯುವ ಮುನ್ನ ರೈಲಿನೊಳಗಡೆ ಫಲಕ ಪ್ರದರ್ಶಿಸಿ ಮೌನ ಪ್ರತಿಭಟನೆ ನಡೆಸಿದರು. ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಬಳಿಕ ‘ಮೆಟ್ರೊ ಪರಿಷ್ಕೃತ ದರ ಹಿಂಪಡೆಯಿರಿ’ ಎಂಬ ಫಲಕ ಪ್ರದರ್ಶಿಸಿದರು.
ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾದ ಮೇಲೆ ಶೇ.13ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಪ್ರಯಾಣಿಕರ ಮೇಲೆ ಹೊರೆ ಬಿದ್ದಿದೆ ಎಂಬುದಕ್ಕೆ ಇದು ನಿದರ್ಶನ. ದರ ಏರಿಕೆಯಾದ ಮೇಲೆ ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಈಗಿನ ಪರಿಷ್ಕೃತ ದರವು ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮನಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.72.9ರಷ್ಟು ಜನರು ಅಭಿಪ್ರಾಯ ತಿಳಿಸಿದ್ದರು. ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರು, ವಿದ್ಯಾರ್ಥಿಗಳು ಸೇರಿ ಅನೇಕರಿಗೆ ಬೆಲೆ ಏರಿಕೆ ಹೊರೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.40.4ರಷ್ಟು ಜನರು ಮೆಟ್ರೊವನ್ನು ಪ್ರಾಥಮಿಕ ಸಾರಿಗೆಯಾಗಿ ಬಳಸುತ್ತಾರೆ. ಶೇ.73.4ರಷ್ಟು ಜನರು ಸಾರಿಗೆಗಾಗಿ ದಿನಕ್ಕೆ ₹50 - ₹150 ಖರ್ಚು ಮಾಡುತ್ತಾರೆ. ಅನಿವಾರ್ಯವಲ್ಲದ ವೇಳೆ ಶೇ.75.4ರಷ್ಟು ಜನರು ಮೆಟ್ರೊ ಬಿಟ್ಟು ಬೇರೆ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಗ್ರೀನ್ ಪೀಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.