ಸಾರಾಂಶ
ಶಿರಹಟ್ಟಿ: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರು ಗೂಡು ಮಾರಲು ಬಂದ ಸಮಯದಲ್ಲಿ ಖರೀದಿದಾರರೊಬ್ಬರು ರೈತರ ರೇಷ್ಮೆ ಗೂಡನ್ನು ಕಳ್ಳತನ ಮಾಡಿ ರೈತರ ಕೈಗೆ ಸಿಕ್ಕುಬಿದ್ದಿದ್ದು, ಕದ್ದ ಗೂಡನ್ನು ಚೆಲ್ಲಿ ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ. ಲಕ್ಷ್ಮೇಶ್ವರ ತಾಲೂಕಿನ ರೈತ ಬೀರಪ್ಪ ಪೂಜಾರ ಶಿರಹಟ್ಟಿ ರೇಷ್ಮೆ ಗೂಡು ಮಾರಾಟ ಕೇಂದ್ರಕ್ಕೆ ಗೂಡು ಮಾರಲು ಬಂದಿದ್ದು, ಚಹಾ ಕುಡಿಯಲು ಅಂತಾ ಹೊರಗಡೆ ಹೋದ ಸಮಯದಲ್ಲಿ ಗೂಡು ಕಳ್ಳತನವಾಗಿದ್ದು ಗೊತ್ತಾಗಿದ್ದು, ಅಷ್ಟರಲ್ಲಿಯೇ ಕಳ್ಳತನ ಮಾಡಿದ ವ್ಯಕ್ತಿ ಗೂಡು ಚೆಲ್ಲಿ ಪರಾರಿಯಾಗಿದ್ದಾನೆ. ಶಿರಹಟ್ಟಿ ರೇಷ್ಮೆ ಮಾರುಕಟ್ಟೆಯಲ್ಲಿ ಒಂದಿಲ್ಲಾ ಒಂದು ದಿನ ರೈತರ ಗೂಡು ಕಳ್ಳತನವಾಗುತ್ತಿದ್ದು, ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇಲಾಖೆಯ ಎಲ್ಲ ಸಿಸಿ ಕ್ಯಾಮೆರಾಗಳು ಬಂದ್ ಆಗಿದ್ದು, ದುರಸ್ತಿ ಮಾಡಿಸದೇ ರೇಷ್ಮೆ ಮಾರುಕಟ್ಟೆ ಅಧಿಕಾರಿ ಬೇಜವಾಬ್ದಾರಿ ತೋರಿದ್ದಾರೆ ಎಂದು ರೈತರು ಆರೋಪಿಸಿದರು.ನೂರಾರು ಜನ ರೈತರು ಸಂಜೆ ತೀವ್ರ ವಿರೋಧ ವ್ಯಕ್ತಪಡಿಸಿ ರೈತರ ರಕ್ತ ಹೀರುತ್ತಿರುವ ರೀಲರ್‌ಗಳ ಮತ್ತು ಖರೀದಿದಾರರ ವಿರುದ್ಧ ಘೋಷಣೆ ಕೂಗುತ್ತಾ ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಅಸಮಾಧಾನ ಹೊರಹಾಕಿದರು.ಡಿಡಿ ಬರುವವರೆಗೂ ಪ್ರತಿಭಟನೆ ಕೈಬಿಡಲ್ಲ: ಶಿರಹಟ್ಟಿ ರೇಷ್ಮೆ ಮಾರುಕಟ್ಟೆ ಅಧಿಕಾರಿ ಎಲ್ಲರೊಂದಿಗೆ ಶಾಮೀಲಾಗಿ ಈ ಕೃತ್ಯ ನಡೆಸಿದ್ದಾರೆ. ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾರುಕಟ್ಟೆ ಅಧಿಕಾರಿ ಗಮನಕ್ಕೆ ತಂದರೆ ಒಂದು ದಿನವೂ ರೈತರ ಕಷ್ಟ ಕೇಳದೇ ರೇಷ್ಮೆ ಮಾರುಕಟ್ಟೆ ಹಾಳಾಗುವಂತೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧವಾದ ಶಿರಹಟ್ಟಿ ರೇಷ್ಮೆ ಮಾರುಕಟ್ಟೆ ಸದ್ಯ ಅಧಿಕಾರಿಗಳ ವರ್ತನೆಯಿಂದ ಬಿಕೋ ಎನ್ನುತ್ತಿದೆ ಎಂದು ರೈತರು ದೂರಿದರು.
ರೇಷ್ಮೆ ಜಿಲ್ಲಾ ಉಪನಿರ್ದೆಶಕ ಕೈಲಾಸಮೂರ್ತಿ ಅವರು ಸ್ಥಳಕ್ಕೆ ಆಗಮಿಸಬೇಕು. ರೈತರ ನಿತ್ಯದ ಗೋಳು ಕೇಳಬೇಕು. ರೈತರ ಶೋಷಣೆ ನಿಲ್ಲಬೇಕು. ಅವರು ಬಂದು ನಮ್ಮ ಸಮಸ್ಯೆ ಆಲಿಸಿ ರೈತರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವವರೆಗೂ ಯಾವುದೇ ಬೆದರಿಕೆ, ಮನವೊಲಿಕೆಗೆ ಹಿಂಜರಿಯದೇ ಪ್ರತಿಭಟನೆ ಕೈಬಿಸುವುದಿಲ್ಲ ಎಂದು ಪಟ್ಟು ಹಿಡಿದರು.ಕೆಲ ಗಂಟೆ ನಂತರ ಜಿಲ್ಲಾ ರೇಷ್ಮೆ ಉಪನಿರ್ದೇಶಕರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತರ ಗೋಳು ಆಲಿಸಿದರು. ಸುಮಾರು ವರ್ಷಗಳಿಂದ ಮಾರುಕಟ್ಟೆ ಅಧಿಕಾರಿ ಇಲ್ಲಿಯೇ ಕೆಲಸ ಮಾಡುತ್ತಿದ್ದು, ಅಧಿಕಾರಿಯ ನಿರ್ಲಕ್ಷ್ಯತನದಿಂದ ಇಲ್ಲಿ ಅವ್ಯವಹಾರಗಳು ನಡೆಯುತ್ತಿವೆ. ತಕ್ಷಣವೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ರೈತರು ಅಧಿಕಾರಿಗಳೆದುರು ಆಗ್ರಹಿಸಿದರು.ಅಧಿಕಾರಿ ಹೇಳಿಕೆ: ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ರೇಷ್ಮೆ ಉಪನಿರ್ದೇಶಕ ಶ್ರೀಶೈಲ ಮೂರ್ತಿ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಅವರು, ರೇಷ್ಮೆ ಗೂಡು ಖರೀದಿದಾರರ ಮಗ ರೈತರ ಗೂಡು ಕಳ್ಳತನ ಮಾಡಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿವೆ. ಇನ್ನು ಮುಂದೆ ಖರೀದಿದಾರರು ಯಾವುದೇ ವ್ಯವಹಾರ ಮಾಡದಂತೆ ಅವರ ಲೈಸೆನ್ಸ್ ರದ್ದುಪಡಿಸಿ ಕ್ರಮ ತೆಗೆದುಕೊಳ್ಳುವ ಜತೆಗೆ ರೇಷ್ಮೆ ಮಾರುಕಟ್ಟೆ ಅಧಿಕಾರಿ ಹಳ್ಯಾಳ ವಿರುದ್ಧ ರೈತರ ಆರೋಪಗಳು ಕೇಳಿ ಬಂದಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸುವುದಾಗಿ ತಿಳಿಸಿದರು.ರೀಲಿಂಗ್ ಕೋಣೆಯಲ್ಲಿ ಕೋಳಿ ಸಾಕಾಣಿಕೆ: ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೀಲರ್‌ಗಳು ಕೋಳಿ ಸಾಕಾಣಿಕೆ ಕೇಂದ್ರ ತೆರೆದಿದ್ದು, ಸದ್ಯ ೧೨೦೦ ಕೋಳಿ ಸಾಕಿದ್ದಾರೆ. ರೇಷ್ಮೆ ಮಾರುಕಟ್ಟೆ ಅಧಿಕಾರಿಯ ದಿವ್ಯ ನಿರ್ಲಕ್ಷ್ಯ ಹಾಗೂ ಇವರ ಬೆಂಬಲದಿಂದಲೇ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಪ್ರಸಿದ್ಧ ರೇಷ್ಮೆ ಮಾರುಕಟ್ಟೆ ಬಂದಾಗುವಂತಾಗಿದೆ. ಇವರನ್ನು ಯಾವುದೇ ಕಾರಣಕ್ಕೂ ಮೇಲಧಿಕಾರಿಗಳು ಕ್ಷಮಿಸದೇ ಅಮಾನತು ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಈ ಎಲ್ಲ ಘಟನೆಗೆ ಸಂಬಂಧಿಸಿದಂತೆ ರೈತರು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇತ್ತ ತಿರುಗಿ ನೋಡದೇ ಯಾವುದನ್ನು ಪರಿಶೀಲನೆ ಮಾಡದೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾ ನಿರತ ರೈತರು ಗಂಭೀರ ಆರೋಪ ಮಾಡಿದ್ದಾರೆ.ನೀಲಪ್ಪ ಖಾನಾಪೂರ, ಎಚ್.ಎಂ. ದೇವಗಿರಿ, ಈರಣ್ಣ ಕಲ್ಯಾಣಿ, ನಿಂಗಪ್ಪ ತುಳಿ, ಸಂತೋಷ ಕುರಿ, ಆನಂದ ಸ್ವಾಮಿ, ಗೂಳಪ್ಪ ಕರಿಗಾರ, ಫಕ್ಕೀರೇಶ ಮುರಾರಿ, ನಾಗೇಶ ಇಂಗಳಗಿ, ಶಿವನಗೌಡ ಪಾಟೀಲ, ಚಂದ್ರು ಜಿಡಗಣ್ಣವರ ಇದ್ದರು.