ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ತೆರಳಿದರೂ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ. ಪರಿಣಾಮ ಪಟ್ಟಣದ ಕೆಲ ಬಡಾವಣೆ ಹಾಗೂ ಜೋಡುರಸ್ತೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಕಸ ರಾಶಿಗಳು ಕಾಣುವುದು ಸಾಮಾನ್ಯ.

ಎಸ್.ಎಂ. ಸೈಯದ್ಗಜೇಂದ್ರಗಡ: ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಪುರಸಭೆಯವರು ಹೇಳುತ್ತಿದ್ದರೂ ಪಟ್ಟಣದ ಹಲವೆಡೆ ಕಣ್ಣಿಗೆ ಕಸದ ರಾಶಿ ರಾಚುತ್ತಿವೆ. ಬಹುತೇಕ ಚರಂಡಿಗಳು ಹೂಳು ತುಂಬಿದ್ದು, ಗಬ್ಬೆದ್ದು ನಾರುತ್ತಿವೆ.

ಪಟ್ಟಣದ ೨೩ ವಾರ್ಡ್‌ಗಳಿಂದ ಪ್ರತಿದಿನ ೧೧ ಟನ್ ಕಸ ಉತ್ಪಾದನೆ ಆಗುತ್ತಿದೆ. ನಿತ್ಯ ಪುರಸಭೆಯಿಂದ ಅಂದಾಜು ೯ ಟನ್ ಕಸ ವಿಲೇವಾರಿ ಆಗುತ್ತಿದೆ. ಇನ್ನುಳಿದ ೨ ಟನ್ ಕಸದಲ್ಲಿ ಚರಂಡಿಯಿಂದ ಹಾಗೂ ರಸ್ತೆಯಲ್ಲಿ ಬಿಸಾಕುವ ಕಸವಾಗಿದೆ. ಈ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ತೆರಳಿದರೂ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ. ಪರಿಣಾಮ ಪಟ್ಟಣದ ಕೆಲ ಬಡಾವಣೆ ಹಾಗೂ ಜೋಡುರಸ್ತೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಕಸ ರಾಶಿಗಳು ಕಾಣುವುದು ಸಾಮಾನ್ಯ.ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಜಾಗೃತಿ ಜತೆಗೆ ಆದ್ಯತೆ ನೀಡುತ್ತಿದೆ. ಆದರೆ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಇತ್ತ ಜೋಡುರಸ್ತೆ ಸೇರಿ ಕೊಳ್ಳಿಯವರ ಕತ್ರಿಯಲ್ಲಿ ನಡೆಯುವ ಬೀದಿಬದಿ ವ್ಯಾಪಾರ ಬಳಿಕ ಉಳಿದ ಕಸವನ್ನು ರಸ್ತೆಯಲ್ಲಿ ಎಸೆಯುವುದರಿಂದ ಚರಂಡಿಗಳಲ್ಲಿ ವ್ಯಾಪಕ ಪ್ರಮಾಣದ ಪ್ಲಾಸ್ಟಿಕ್ ಚೀಲ, ಬಾಟಲಿ ಸೇರಿ ಇತರ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿನ ಕೊಳಚೆ ನೀರು ರಸ್ತೆ ಮೇಲೆ ಹರಿದು ಗಬ್ಬುವಾಸನೆ ಬೀರುತ್ತದೆ.ಪಟ್ಟಣದ ೨೩ ವಾರ್ಡಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ ವಿಲೇವಾರಿಗೆ ೭ ಟಾಟಾ ಎಸ್‌, ೩ ಟ್ರ್ಯಾಕ್ಟರ್, ೧ ಡೋಜರ್, ೧ ಸ್ವೀಪಿಂಗ್ ಮಷಿನ್, ೧ ಟಿಪ್ಪರ್ ಸೇರಿ ೧೭ ವಾಹನಗಳಿದ್ದು, ೭ ಜನ ವಾಹನ ಚಾಲಕರಿದ್ದಾರೆ. ಅಲ್ಲದೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ೫೬ ಪೌರಕಾರ್ಮಿಕರ ಅಗತ್ಯವಿದೆ. ಆದರೆ ೩೮ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ಕಾರ್ಮಿಕರು ಹಾಗೂ ವಾಹನ ಚಾಲಕರ ಕೊರತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಅಮೃತ್ ೨.೦ ಯೋಜನೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಮನಸೋ ಇಚ್ಛೆ ರಸ್ತೆಗಳನ್ನು ಒಡೆದಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಆದರೆ ಪಟ್ಟಣದಲ್ಲಿ ಪೂರ್ಣ ಪ್ರಮಾಣದ ಸ್ವಚ್ಛತೆಗೆ ಪುರಸಭೆ ಪರದಾಡುತ್ತಿದೆ. ಘನತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಿದ ಕಸದಿಂದ ಉತ್ಪಾದನೆಯಾದ ಎರೆಹುಳು ಗೊಬ್ಬರ ೧೮ ಟನ್ ಮಾರಾಟಕ್ಕೆ ಸಿದ್ಧವಾಗಿದೆ.

ಸ್ವಚ್ಛತೆಗೆ ಕೈಜೋಡಿಸಿ: ಪಟ್ಟಣದ ೨೩ ವಾರ್ಡಗಳಲ್ಲಿ ಪುರಸಭೆಯ ಕಸದ ವಾಹನಗಳು ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಕಸದ ವಾಹನಗಳಲ್ಲಿ ಕಸ ಹಾಕುವ ಮೂಲಕ ಪುರಸಭೆಗೆ ಸಹಕಾರ ನೀಡಿ ಸುಂದರ ಪಟ್ಟಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶಿವಕುಮಾರ ಇಲಾಳ ತಿಳಿಸಿದರು.ಸ್ವಚ್ಛ ಪಟ್ಟಣ: ಪುರಸಭೆಯವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಚಿವರು ಸೇರಿ ಗಣ್ಯರು ಆಗಮಿಸುವ ವೇಳೆ ಸ್ವಚ್ಛತೆಗಾಗಿ ಆದ್ಯತೆಯನ್ನು ನೀಡುತ್ತಾರೆ. ಉಳಿದ ಸಮಯದಲ್ಲಿ ಅದೇ ರಾಗ, ಅದೇ ತಾಳ ಎನ್ನುವಂಥ ಧೋರಣೆ ಕೈಬಿಟ್ಟರೆ ಸ್ವಚ್ಛ ಪಟ್ಟಣವಾಗುವುದರಲ್ಲಿ ಸಂದೇಹವಿಲ್ಲ ಎಂದು ನಿವಾಸಿಗಳು ತಿಳಿಸಿದರು.