ಸಾರಾಂಶ
ಮೂಲ್ಕಿ ವಿವೇಕ ಜಾಗೃತ ಬಳಗ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ದಿತ್ಯತ್ರಯರ ಜೀವನ ಗಾಥೆಯ ಹಿರಿಮೆಯ ದಿವ್ಯ ಗಾನಾಮೃತ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಸ್ವಾವಲಂಬಿ, ಸ್ವಾಭಿಮಾನಿ ರಾಷ್ಟ್ರವಾಗಿ ರೂಪಿಸಲು ಯುವಜನತೆಗೆ ಸ್ವಾಮೀ ವಿವೇಕಾನಂದರ ಆದರ್ಶ ಮತ್ತು ಶಾಂತಿ ನೆಮ್ಮದಿಯ ಜೀವನಕ್ಕಾಗಿ ರಾಮಕೃಷ್ಣ ಪರಮಹಂಸರು ಹಾಗೂ ಮಾತೆ ಶಾರದಾ ದೇವಿಯವರ ಆದರ್ಶ ಪಾಲನೆ ಸದಾ ಪ್ರಸ್ತುತ ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾ ನಿರ್ದೇಶಕ ಡಾ. ವಿವೇಕ ಉಡುಪ ಹೇಳಿದರು.ಮೂಲ್ಕಿ ವಿವೇಕ ಜಾಗೃತ ಬಳಗ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ನಡೆದ ದಿತ್ಯತ್ರಯರ ಜೀವನ ಗಾಥೆಯ ಹಿರಿಮೆಯ ದಿವ್ಯ ಗಾನಾಮೃತ ಉದ್ಘಾಟಿಸಿ ಮಾತನಾಡಿದ ಅವರು ಜನ ಸಾಮಾನ್ಯರಲ್ಲಿ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಸ್ವಾಮಿ ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿ ಮತ್ತು ಸ್ವಾಮೀ ವಿವೇಕಾನಂದರ ತತ್ವ ಆದರ್ಶಗಳನ್ನು ಜನ ಮಾನಸ ತಲುಪಿಸಲು ಡಿವೈನ್ ಪಾರ್ಕ್ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಡಿವೈನ್ ಪಾರ್ಕ್ ನ ಭಜನಾಶ್ರೀ ಸಹೋದರಿ ನಿವೇದಿತಾ ರಾಜ್ ದಿವ್ಯ ಗಾನಾಮೃತ ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ಶ್ರೀನಿವಾಸ್ ಶ್ರೀಯನಾನ್ ವಹಿಸಿದ್ದು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಾಧಿಕಾರಿ ಡಾ. ಮಾನಸ, ಮಂಡ್ಯ ನಾಗಮಂಗಲದ ಸೆಂಟ್ರಲ್ ಕೌನ್ಸಿಲ್ ಫಾರ್ ಯೋಗಾ ಮತ್ತು ನ್ಯಾಚುರೋಪತಿಯ ಸಹಾಯಕ ನಿರ್ದೇಶಕ ಡಾ.ವಾದಿರಾಜ್, ಮೂಲ್ಕಿ ಮಂದಿರದ ಉಸ್ತುವಾರಿ ರಮೇಶ್ ಬಂಗೇರ ಉಪಸ್ಥಿತರಿದ್ದರು.ಸುನಂದಾ ಶೆಟ್ಟಿ ಸ್ವಾಗತಿಸಿದರು, ಸುಗಂಧಿ ಕೇಶವ ಪ್ರಸ್ತಾವಿಸಿದರು. ಸುಜಾತಾ ಶೆಟ್ಟಿ ನಿರೂಪಿಸಿದರು. ಪ್ರಾಣೇಶ ಹೆಜಮಾಡಿ ವಂದಿಸಿದರು.