ಹಿಂದೆ ಕಾಲರಾ, ದಡಾರ, ಸಿಡುಬು ಮೊದಲಾದ ರೋಗಗಳು ಬರುತ್ತಿದ್ದವು. ಆಗ ಸಾಮಾನ್ಯವಾಗಿ ಪೂಜೆ ಮಾಡಿದರೆ ಹೋಗುತ್ತದೆ ಎಂದು ಹೇಳುತ್ತಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರುಯಾವುದೇ ಬಂಡವಾಳವಿಲ್ಲದೇ ರೋಗವನ್ನು ಗುಣಪಡಿಸುವ ಚಿಕಿತ್ಸೆ ಎಂದರೇ ಯೋಗ ಮತ್ತು ಪ್ರಾಣಾಯಾಮ ಎಂದು ಬೆಂಗಳೂರು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕ ಲಕ್ಷ್ಮೀ ಶ್ರೀನಿವಾಸ ಗುರೂಜಿ ಹೇಳಿದರು.ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಭಾನುವಾರ ವಿಶ್ವ ಮಾನವ ಯೋಗ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ, ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಕಾಲರಾ, ದಡಾರ, ಸಿಡುಬು ಮೊದಲಾದ ರೋಗಗಳು ಬರುತ್ತಿದ್ದವು. ಆಗ ಸಾಮಾನ್ಯವಾಗಿ ಪೂಜೆ ಮಾಡಿದರೆ ಹೋಗುತ್ತದೆ ಎಂದು ಹೇಳುತ್ತಿದ್ದರು. ಇನ್ನೂ ಕೆಲವರು ಆಗಲೂ ಯೋಗ ಮಾಡಿ, ದೈಹಿಕ ಕಸರತ್ತು ಮಾಡಿ ಎಂದು ಸೂಚಿಸುತ್ತಿದ್ದರು. ಈಗ ಆ ರೀತಿಯ ರೋಗಗಳಿಲ್ಲ. ಆದರೆ ಯೋಗ ಮಾಡಿದರೆ ರೋಗಗಳಿಂದ ದೂರ ಇರಬಹುದು, ಆಸ್ಪತ್ರೆಗಳಿಗೆ ಲಕ್ಷಾಂತರ ರೂ. ಕಟ್ಟುವುದನ್ನು ತಡೆಯಬಹುದು ಎಂದರು.ಮೈಸೂರಿನಲ್ಲಿ ರಾಜರ ಕಾಲದಿಂದಲೂ ಯೋಗಕ್ಕೆ ಪ್ರೋತ್ಸಾಹ ಇದೆ. ಬಿಕೆಎಸ್ ಅಯ್ಯಂಗಾರ್, ಕೃಷ್ಣಮಾಚಾರ್ ಮೊದಲಾದವರು ಅದನ್ನು ಬೆಳೆಸಿದರು ವಿದೇಶಗಳಲ್ಲಿ ಕೋಟ್ಯಂತರ ರೂ. ಇರುತ್ತದೆ. ಆದರೆ ಆರೋಗ್ಯ ಇರುವುದಿಲ್ಲ. ಹೀಗಾಗಿ ಅಲ್ಲಿ ಯೋಗಕ್ಕೆ ಬೇಡಿಕೆ ಬಂದಿದೆ. ನಮ್ಮಲ್ಲಿ ಯೋಗ ಮರೆಯುತ್ತಿದ್ದಾರೆ ಎಂದು ಅವರು ವಿಷಾದಿಸಿದರು.ಪ್ರತಿಯೊಂದು ಮನೆಯಲ್ಲೊಬ್ಬ ಯೋಗಪಟು ಇರಬೇಕು. ಆ ರೀತಿಯಲ್ಲಿ ಯೋಗ ಪ್ರಚಾರವಾಗಬೇಕು ಎಂದು ಅವರು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಗೋವಿಂದೇಗೌಡ ಮಾತನಾಡಿ, ತಮಗೆ ಯೋಗದಿಂದ ಮಧುಮೇಹ ನಿಯಂತ್ರಣಕ್ಕೆ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೈಸೂರು ಯೋಗಕ್ಕೆ ಹೆಸರುವಾಸಿ. ಇದೀಗ ಅಂತಾರಾಷ್ಟ್ರೀಯ ಯೋಗದಿನ ಆಚರಿಸುವುದರೊಂದಿಗೆ ವಿದೇಶಗಳಲ್ಲೂ ಜನಪ್ರಿಯವಾಗಿದೆ ಎಂದರು.ಜಿಎಸ್ಎಸ್ ಪ್ರತಿಷ್ಠಾನ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ಸಿಪಿಸಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಎಸ್.ಕೆ. ರಾಜೇಗೌಡ, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಪಿ.ಎನ್. ಗಣೇಶ್ ಕುಮಾರ್, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್, ಕಾರ್ಯಾಧ್ಯಕ್ಷ ಬಿ.ಪಿ. ಮೂರ್ತಿ ಗೋಪಾಲರಾಜು ಮುಖ್ಯ ಅತಿಥಿಗಳಾಗಿದ್ದರು. ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್. ಅನಂತ ಸೇರಿದಂತೆ ವಿವಿಧ .ಯೋಗ ಸಂಸ್ಥೆಗಳ ಮುಖಂಡರು ಇದ್ದರು.ವಿಶ್ವಮಾನವ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯೋಗ ಕುಮಾರ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು. ಮಂಜುಳಾ ಪ್ರಾರ್ಥಿಸಿದರು. ವಿವೇಕಾನಂದ ಯೋಗ ಸಂಸ್ಥೆಯ ವಿದ್ಯಾರ್ಥಿಗಳು ಅದ್ಭುತವಾಗಿ ಯೋಗಾಸನದ ವಿವಿಧ ಭಂಗಿ ಹಾಗೂ ನೃತ್ಯ ಪ್ರದರ್ಶಿಸಿ, ಸಭಿಕರ ಮೆಚ್ಚುಗೆಗೆ ಪಾತ್ರರಾದರು.