ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಮಹತ್ವವಿದೆ. ಕೇಂದ್ರ, ರಾಜ್ಯ ಸರ್ಕಾರದ ಸೌಲಭ್ಯ ಪಡೆದು ನಿರುದ್ಯೋಗ ಪದವೀಧರರಿಗೆ ಏನು ಮಾಡಬಹುದೆಂಬುದರ ಕುರಿತು ಜಿಲ್ಲೆಯ ೨ ಕಡೆ ಚಿಂತನಾ ಸಮಾವೇಶ ನಡೆಸುವುದಕ್ಕೆ ಯೋಜನೆ ರೂಪಿಸುತ್ತಿದ್ದೇನೆ.

ಯಲ್ಲಾಪುರ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ವಿಧಾನಪರಿಷತ್ತಿಗೆ ನನ್ನನ್ನು ೩ನೇ ಅವಧಿಗೆ ಅತ್ಯಂತ ಅಧಿಕ ಅಂತರದಿಂದ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಸೋಮವಾರ ಅಡಿಕೆ ಭವನದಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ನೀಡಿದ ಭರವಸೆಗಳಲ್ಲಿ ಪ್ರಮುಖವಾದದ್ದು ಹಳೆ ಪಿಂಚಣಿ ಸೌಲಭ್ಯ ದೊರಕಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ೨೦೦೬ರಿಂದ ನೇಮಕಾತಿ ಆದವರಿಗೆ ಪಿಂಚಣಿ ಮತ್ತು ಅನುದಾನರಹಿತ ಶಾಲೆಗಳಿಗೆ ಅನುದಾನ ನೀಡುವುದು. ನಿರುದ್ಯೋಗ ಪದವೀಧರರಿಗೆ ಉದ್ಯೋಗ ಕಲ್ಪಿಸುವುದು ಈ ಎಲ್ಲ ಭರವಸೆಯಂತೆ ನಾನು ಹೋರಾಟ ಮಾಡಿ ಶ್ರಮ ವಹಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಮಹತ್ವವಿದೆ. ಕೇಂದ್ರ, ರಾಜ್ಯ ಸರ್ಕಾರದ ಸೌಲಭ್ಯ ಪಡೆದು ನಿರುದ್ಯೋಗ ಪದವೀಧರರಿಗೆ ಏನು ಮಾಡಬಹುದೆಂಬುದರ ಕುರಿತು ಜಿಲ್ಲೆಯ ೨ ಕಡೆ ಚಿಂತನಾ ಸಮಾವೇಶ ನಡೆಸುವುದಕ್ಕೆ ಯೋಜನೆ ರೂಪಿಸುತ್ತಿದ್ದೇನೆ ಎಂದರು.

ವಿಧಾನಪರಿಷತ್ತಿನ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ವಿಧಾನಪರಿಷತ್ ಎಂದರೆ ಚಿಂತಕರ ಚಾವಡಿ ಎನ್ನಲಾಗುತ್ತದೆ. ಕೆಲ ಹಿರಿಯ ಸದಸ್ಯರು ಅಲ್ಲಿ ಸಾಕಷ್ಟು ಪ್ರಭುತ್ವ ಸಾಧಿಸಿ ಅಧಿವೇಶನದಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸುತ್ತಾರೆ ಎಂದ ಅವರು, ಬೇಡ್ತಿ-ವರದಾ ನದಿ ಈ ಯೋಜನೆಯ ಹೋರಾಟದ ಸಂಘಟನೆಯನ್ನು ಒಡೆಯುವ ಹುನ್ನಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಂಕನೂರ ಅವರು ೧೨ ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ ಪರಿಣಾಮವೇ ದಾಖಲೆ ಗೆಲುವಾಗಲು ಸಾಧ್ಯವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಮುಖರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ರಾಘವೇಂದ್ರ ಭಟ್ಟ, ಶಿವಲಿಂಗಯ್ಯ ಅಲ್ಲಯ್ಯನವರಮಠ, ರವಿ ಕೈಟ್ಕರ್, ಗಣೇಶ ಪಾಠಣಕರ ಉಪಸ್ಥಿತರಿದ್ದರು. ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಡಳ ಕಾರ್ಯದರ್ಶಿ ನಟರಾಜ ಗೌಡರ್ ನಿರ್ವಹಿಸಿದರು. ಕುಮಾರಿ ವೇದಾ ಭಟ್ಟ ವಂದಿಸಿದರು.