ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ. ಈ ನಿಟ್ಟಿನಲ್ಲಿ ಸಿಂದಗಿ ತಾಲೂಕು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಭಾನುವಾರ ಹಮ್ಮಿಕೊಂಡ ವಿದ್ಯಾಚೇತನ ಪ್ರಕಾಶನ ನೀಡುವ ರಾಜ್ಯಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಸಾಹಿತಿ ಹ.ಮ.ಪೂಜಾರ ತಮ್ಮ 85ನೇ ವಯಸ್ಸಿನಲ್ಲೂ ಪಿಂಚಣಿ ಹಣದಲ್ಲಿ ರಾಜ್ಯಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಮಕ್ಕಳ ಸಾಹಿತ್ಯ ಪುರಸ್ಕಾರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಬೆಂಗಳೂರಿನ ವಸುವತ್ಸಲೆ ಅವರ ಅಂತರಿಕ್ಷದಲ್ಲಿ ವಿಹಾ ಕಥಾ ಸಂಕಲನ, ತುಮಕೂರು ನಗರದ ಬ್ಯಾಡನೂರು ನಾಗಭೂಷಣರ ಮಿನುಗುವ ಮನುಷ್ಯ ಕಾದಂಬರಿ, ಬೀಳಗಿಯ ಸೋಮಲಿಂಗ ಬೇಡರ ಅವರ ಬಾರೆ ಚುಕ್ಕಿ ಬೆಳ್ಳಿಚುಕ್ಕಿ ಕವನ ಸಂಕಲನಕ್ಕೆ ಬಾಲಸಾಹಿತ್ಯ ಪುರಸ್ಕಾರ ಮತ್ತು ₹ 5 ಸಾವಿರ ನಗದು ಮ್ತತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.ಮಕ್ಕಳ ವಿಭಾಗದ ಚಿಗುರು ಪ್ರಶಸ್ತಿಯನ್ನು ಆಲಮೇಲ ತಾಲೂಕಿನ ಕಡಣಿ ಗ್ರಾಮದ ನವ್ಯ ಕತ್ತಿ ಅವರ ಮಾಯಾಗುಹೆ ಕಥಾ ಸಂಕಲನಕ್ಕೆ ಮತ್ತು ಉಡುಪಿ ಜಿಲ್ಲೆಯ ಸಿದ್ದಾಪುರ ಪಟ್ಟಣದ ಎಚ್.ವಿಧಾತ್ರೀ ರವಿಶಂಕರ ಅವರ ನಕ್ಷತ್ರ ಪಟಲ ಕವನ ಸಂಕಲನಕ್ಕೆ ಪ್ರಶಸ್ತಿ ಪ್ರದಾನ ₹ 2 ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ವಸು ವಸತ್ಸಲೆ, ನಾಗಭೂಷಣ, ಸೋಮಲಿಂಗ ಬೇಡರ್, ನವ್ಯ ಕತ್ತಿ, ಎಚ್.ವಿಧ್ಯಾತ್ರೀ ಮಾತನಾಡಿ, ಈ ಪ್ರಶಸ್ತಿ ಸರ್ಕಾರ, ಅಕಾಡೆಮಿ ನೀಡುವ ಪ್ರಶಸ್ತಿಗಿಂತಲೂ ಹೆಚ್ಚಿದೆ. ತಮ್ಮ 85ನೇ ಇಳಿ ವಯಸ್ಸಿನಲ್ಲಿ ಹ.ಮ.ಪೂಜಾರ ಅವರ ಮಕ್ಕಳ ಸಾಹಿತ್ಯ ಸೇವೆ ನಮಗೆಲ್ಲ ಮಾದರಿಯಾಗಿದೆ ಎಂದು ಹೇಳಿದರು.ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಹಿತಿ ಹ.ಮ.ಪೂಜಾರ ಕಾರ್ಯಕ್ರಮಗಳು ಮಕ್ಕಳ ಮತ್ತು ಮಕ್ಕಳ ಸಾಹಿತ್ಯಕ್ಕೆ ಪೂರಕವಾಗಿವೆ. ಅವರನ್ನು ಗೌರವಿಸುವುದು ನಾಡಿನ ಮಕ್ಕಳಿಗೆ ಗೌರವಿಸಿದಹಾಗೆ. ಅವರ ಮಕ್ಕಳ ಸಾಹಿತ್ಯ ಸೇವೆಯನ್ನು ಬಾಲವಿಕಾಸ ಅಕಾಡೆಮಿ ತಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಮಕ್ಕಳ ಸಾಹಿತಿ, ವಿದ್ಯಾಚೇತನ ಪ್ರಕಾಶನದ ಪ್ರಕಾಶಕ ಹ.ಮ. ಪೂಜಾರ ಮಾತನಾಡಿ, ಮಕ್ಕಳಲ್ಲಿ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು, ಅವರಲ್ಲಿ ಮೌಲ್ಯಗಳನ್ನು ತುಂಬಬೇಕು. ಅವರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳ ಬೇಕು ಎಂಬುದು ನನ್ನ ಮಹದಾಶೆ. ಈ ನಿಟ್ಟಿನಲ್ಲಿ ಕಳೆದ 50 ವರ್ಷದಿಂದ ಮಕ್ಕಳ ಬಳಗ ಕಟ್ಟಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮ, ಕಳೆದ 30 ವರ್ಷದಿಂದ ವಿದ್ಯಾಚೇತನ ಪ್ರಕಾಶನ ಪ್ರಾರಂಭಿಸಿ ಮಕ್ಕಳ ಸಾಹಿತ್ಯ ಕೃಷಿ ಮಾಡಲಾಗುತ್ತಿದೆ ಎಂದು ಹೇಳಿದರು.ಜಾನಪದ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ ಮತನಾಡಿದರು. ಸಾರಂಗಮಠ-ಗಚ್ಚಿನಮಠದ ಗುರುಕುಲ ಬಾಸ್ಕರ್ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಾರಂಗಮಠ-ಗಚ್ಚಿನಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಎಂ.ಎಂ.ಹೂಗಾರ, ಸಿ.ಎಂ.ಪೂಜಾರಿ, ಬಿ.ಎನ್.ಬಿರಾದಾರ, ವಿ.ಡಿ.ವಸ್ತ್ರದ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಬಿ.ಪಿ.ಕರ್ಜಗಿ, ಎಚ್.ಎಂ.ಉತ್ನಾಳ, ಶಿವಪ್ಪ ಗವಸಾನಿ, ಡಾ.ಶರಣಬಸು ಜೋಗೂರ, ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಸವರಾಜ ಹೂಗಾರ ಶಕುಂತಲಾ ಹಿರೇಮಠ, ಡಾ.ರಮೇಶ ಕತ್ತಿ, ಬಸಯ್ಯ ಹಿರೇಮಠ ಸೇರಿ ವಿದ್ಯಾರ್ಥಿನಿಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಶಿಕ್ಷಕ ಶಂಕರ ಕಟ್ಟಿಮನಿ ಪ್ರಾರ್ಥಿಸಿದರು. ಮಕ್ಕಳ ಸಾಹಿತಿ ಎಸ್.ಎಸ್.ಸಾತಿಹಾಳ ಸ್ವಾಗತಿಸಿದರು. ಶಿಕ್ಷಕ ಸತೀಶ ಕುಲಕರ್ಣಿ ನಿರೂಪಿಸಿದರು. ಮಕ್ಕಳ ಸಾಹಿತಿ ಶಿವಕುಮಾರ ಶಿವಸಿಂಪಿಗೆರ ವಂದಿಸಿದರು.