ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್‌ನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ ಶನಿವಾರ ನಡೆಯಿತು.ಶಾಸಕ ಡಾ.ಭರತ್ ಶೆಟ್ಟಿ ವೈ. ಅಧ್ಯಕ್ಷತೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಸದಾಶಿವ ಉಳ್ಳಾಲ್, 42.35 ಲಕ್ಷ ರು. ವೆಚ್ಚದಲ್ಲಿ ಸೈನಿಕರನ್ನು ಸ್ಮರಿಸುವ ಪಾರ್ಕ್ ನಿರ್ಮಾಣಗೊಂಡಿದೆ. ಶಾಸಕ ಭರತ್ ಶೆಟ್ಟಿ ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಶ್ರಮಿಸಿದ್ದಾರೆ. ಮೂಡ ಸದಸ್ಯರು, ಅಧಿಕಾರಿಗಳು, ಪಾಲಿಕೆಯ ಮಾಜಿ ಸದಸ್ಯರ ಸಮನ್ವಯದೊಂದಿಗೆ ಉತ್ತಮವಾಗಿ ನಿರ್ಮಾಣಗೊಂಡಿದೆ ಎಂದು ಶ್ಲಾಘಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಸ್ಥಳೀಯ ಕಾರ್ಪೊರೇಟರ್, ಸಾರ್ವಜನಿಕರು ಇಲ್ಲಿನ ಜಂಕ್ಷನ್‌ನಲ್ಲಿ ಸೈನಿಕರ ಸ್ಮಾರಕ ನಿರ್ಮಿಸುವ ಬಗ್ಗೆ ಬೇಡಿಕೆ ಇಟ್ಟಿದ್ದರು. ಮೊದಲ ಅವಧಿಯಲ್ಲಿ ಇದಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು, ಈಗ ಸಾಕಾರಗೊಂಡಿದೆ. ಭಾರತವು ಪಾಕಿಸ್ತಾನದ ಉಗ್ರರ ಮೇಲಿನ ಕಾರ್ಯಾಚರಣೆ ಸಂದರ್ಭ ಜಯ ಪಡೆದ ಸಿಂಧೂರ ಕಾರ್ಯಾಚರಣೆ ಸದಾ ನೆನಪಿನಲ್ಲಿ ಉಳಿಯುವಂತಾಗಲು ಸಿಂಧೂರ ವಿಜಯ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು.ಪ್ರಾಧಿಕಾರದ ಸದಸ್ಯರಾದ ನೀರಜ್‌ಚಂದ್ರ ಪಾಲ್, ಅಬ್ದುಲ್ ಜಲೀಲ್, ಸುಮನ್ ದಾಸ್, ಸಬಿತಾ ಮಿಸ್ಕಿತ್, ಮೂಡ ಆಯುಕ್ತ ಮೊಹಮ್ಮದ್ ನಜೀರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅಶ್ವಿನಿ, ಸಹಾಯಕ ಅಭಿಯಂತರ ಅಕ್ಬರ್ ಭಾಷಾ, ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಮನೋಜ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್, ರಂಜಿನಿ ಕೋಟ್ಯಾನ್, ಬಿಜೆಪಿ ಮುಖಂಡರಾದ ಸಿತೇಶ್ ಕೊಂಡೆ, ಆಶಿತ್ ನೋಂಡ, ಹರಿಪ್ರಸಾದ್ ಶೆಟ್ಟಿ, ಉಮೇಶ್ ಮಾಲರಾಯಸಾನ, ಸಂಜಿತ್ ಶೆಟ್ಟಿ, ರಮೇಶ್ ಇದ್ದರು.