ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ ವಿಜೃಂಭಣೆ ಬ್ರಹ್ಮ ರಥೋತ್ಸವ

| Published : May 25 2024, 12:45 AM IST

ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ ವಿಜೃಂಭಣೆ ಬ್ರಹ್ಮ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು ತಾಲೂಕು ಹಾಗು ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ ವಿಜೃಂಭಣೆಯ ಬ್ರಹ್ಮ ರಥೋತ್ಸವದಲ್ಲಿ ಗುರುವಾರ ಮಧ್ಯಾಹ್ನ 3.45ಕ್ಕೆ ಸಾವಿರಾರು ಭಕ್ತರು ಜಯಘೋಷ ಹಾಕುತ್ತ ರಥ ಎಳೆದು ಸಂಭ್ರಮಿಸಿದರು.

ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ । ಹರಕೆ ಹೊತ್ತವರಿಂದ ದಿಂಡುರುಳು ಸೇವೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಹಾಗು ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ ವಿಜೃಂಭಣೆಯ ಬ್ರಹ್ಮ ರಥೋತ್ಸವದಲ್ಲಿ ಗುರುವಾರ ಮಧ್ಯಾಹ್ನ 3.45ಕ್ಕೆ ಸಾವಿರಾರು ಭಕ್ತರು ಜಯಘೋಷ ಹಾಕುತ್ತ ರಥ ಎಳೆದು ಸಂಭ್ರಮಿಸಿದರು. ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ನಾದಸ್ವರ, ವೀರಗಾಸೆ ಮುಂತಾದ ವಾದ್ಯಗಳೊಂದಿಗೆ ಗ್ರಾಮದ ರಾಜ ಬೀದಿ ಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರೀ ಸ್ವಾಮಿಯನ್ನು ಅಲಂಕೃತ ರಥದಲ್ಲಿ ಕೂರಿಸಿ ರಥಕ್ಕೆ ಹೋಮ, ಹವನಗಳು ಮುಗಿದ ನಂತರ ದೃಷ್ಠಿ ಪೂಜೆ ಮಾಡಿ ಭಕ್ತರು ನಮಸ್ಕರಿಸಿ ರಥ ಎಳೆದರು. ಶ್ರೀ ಕಲ್ಲೇಶ್ವರನಿಗೆ ಜೈ ಎಂಬ ಜಯಕಾರ ಮುಗಿಲು ಮುಟ್ಟುತ್ತಿತ್ತು. ಈ ಸಂದರ್ಭದಲ್ಲಿ ರಥದ ಮೇಲೆ ಬಾಳೆಹಣ್ಣು ಎಸೆದರು. ರಥ ಸ್ವಲ್ಪ ದೂರ ಸಾಗಿದ ನಂತರ ಹರಕೆ ಹೊತ್ತ ಸ್ತ್ರೀ-ಪುರುಷರು, ಚಿಕ್ಕವರು-ದೊಡ್ಡವರೆಂಬ ಭೇದವಿಲ್ಲದೆ ದಿಂಡುರುಳು ಸೇವೆ ಮಾಡಿ ಇಷ್ಟಾರ್ಥ ನೆರವೇರಲು ಮಂಗಳಾರತಿ ಮಾಡಿಸಿ ಕೃತಾರ್ಥರಾದರು. ಸಿಂಗಟಗೆರೆ ಶ್ರೀ ಆಂಜನೇಯಸ್ವಾಮಿ, ಶ್ರೀ ಉಡುಸಲಮ್ಮ ಮತ್ತಿತರ ದೇವರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ನಾಗರಾಜಪ್ಪ ಮಾತನಾಡಿ ಭಕ್ತರ ಉತ್ಸಾಹ ಹೆಚ್ಚಿ ರಥೋತ್ಸವ ಅದ್ಧೂರಿಯಾಗಿ ನೆರವೇರಿದೆ. ದೇವಾಲಯದ ರಾಜಗೋಪುರ ನಿರ್ಮಾಣ ಕಾರ್ಯ ಸುಮಾರು 10 ಕೋಟಿ ರು. ಅಂದಾಜಿನಲ್ಲಿ ನಡೆಯಲಿದೆ. ಇದಕ್ಕೆ ಭಕ್ತರು ದೇಣಿಗೆ ನೀಡುವಂತೆ ಮನವಿ ಮಾಡಿದರು. ದೇವಸ್ಥಾನದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗದ ರೈತರು ಪಾನಕದ ಬಂಡಿಗಳನ್ನು ರಥದ ಸುತ್ತ ಓಡಿಸಿ ಹರಕೆ ತೀರಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜಪ್ಪ, ಕಾರ್ಯದರ್ಶಿ ರಮೇಶ್, ಎನ್.ಮೂರ್ತಿ, ಶಿವಮೂರ್ತಿ, ದೇವರಾಜು, ಕಲ್ಲೇಶಪ್ಪ, ಕುಮಾರಪ್ಪ ಇದ್ದರು. ಶಾಸಕ ಕೆ.ಎಸ್.ಆನಂದ್, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರಥೋತ್ಸವದಲ್ಲಿ ಭಾಗವಹಿಸಿದ್ದರು. -- ಬಾಕ್ಸ್ ---ಪ್ರತಿ ವರ್ಷ ಬುದ್ಧ ಪೂರ್ಣಿಮೆಯಂದೇ ಶ್ರೀಕಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯುವುದು ವಾಡಿಕೆ. ಇಡೀ ರಥವನ್ನು ತೆಂಗಿನ ಕಾಯಿ, ಎಳನೀರು, ಬಾಳೆಗೊನೆ, ಅಡಕೆ, ಹೂಹಾರಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಏಳು ಹಳ್ಳಿ ಭಕ್ತರು ಮತ್ತು ಸಿಂಗಟಗೆರೆ ಗ್ರಾಮಸ್ಥರು ಸೇರಿ ನಡೆಸುವ ಈ ಜಾತ್ರಾ ಮಹೋತ್ಸವಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಸಿಂಗಟಗೆರೆಗೆ ಒಂದು ಕಿ.ಮೀ.ದೂರದಲ್ಲಿಯೇ ವಾಹನಗಳನ್ನು ತಡೆಯಲಾಗಿತ್ತು. ಪೋಲೀಸರು ಸೂಕ್ತ ಬಂಧೋಬಸ್ತ್ ಮಾಡಿದ್ದರು. 23ಕೆಕೆಡಿಯು1.ಕಡೂರು ತಾಲೂಕಿನ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ರಸಮೂಹದೊಂದಿಗೆ ಅದ್ಧೂರಿಯಾಗಿ ನಡೆಯಿತು.