ಸಾರಾಂಶ
ತಾಲೂಕಿನ ಸಂಗಾಪುರದ ಸನಿಹದಲ್ಲಿರುವ ಲಕ್ಷ್ಮೀನಾರಾಯಣ ಕೆರೆಯನ್ನು ₹6.50 ಕೋಟಿ ವೆಚ್ಚದಲ್ಲಿ ನವೀಕರಿಸಿ ಪ್ರವಾಸಿಗರ ತಾಣವಾಗಿ ಸಿದ್ಧಗೊಳಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಸಂಗಾಪುರದ ಸನಿಹದಲ್ಲಿರುವ ಲಕ್ಷ್ಮೀನಾರಾಯಣ ಕೆರೆಯನ್ನು ₹6.50 ಕೋಟಿ ವೆಚ್ಚದಲ್ಲಿ ನವೀಕರಿಸಿ ಪ್ರವಾಸಿಗರ ತಾಣವಾಗಿ ಸಿದ್ಧಗೊಳಿಸಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಸಂಗಾಪುರ ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ನೀರು ಬಳಕೆದಾರರ ಸಂಘದವರು ತಮ್ಮ ಶ್ರದ್ಧೆ, ಶ್ರಮದಿಂದ ಕೆಲಸ ನಿರ್ವಹಿಸಬೇಕು. ರೈತರ ಜೀವನಾಡಿಯಾಗಿರುವ ವಿಜಯನಗರ ಕಾಲುವೆಗಳ ಆಧುನಿಕರಣದ ಕರ್ನಾಟಕ ನೀರಾವರಿ ನಿಗಮ, ಕಾಡಾ ತುಂಗಭದ್ರಾ ಯೋಜನೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ಈ ಕಟ್ಟಡ ನಿರ್ಮಿಸಲಾಗಿದ್ದು, ಈ ಭಾಗದ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಂಸದ ಎಸ್. ಶಿವರಾಮಗೌಡ ಮಾತನಾಡಿ, ಈಗಾಗಲೇ ರಾಜ್ಯ, ದೇಶದಲ್ಲಿ ಹಸಿರುಕ್ರಾಂತಿ, ಕ್ಷೀರಕ್ರಾಂತಿ ಕೇಳಿದ್ದೇವೆ. ಆದರೆ ಈಗ ಸಹಕಾರಿ ಕ್ರಾಂತಿ ನೋಡುತ್ತಿದ್ದೇವೆ. ನೀರು ಪವಿತ್ರವಾದದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಈ ಹಿಂದೆ ಎಲ್ಲ ಬೇಕಾಬಿಟ್ಟಿ ಕೆಲಸ ಮಾಡಿ ಲೂಟಿ ಮಾಡಿದ್ದರು. ಆದರೆ ಅದನ್ನು ತಡೆಗಟ್ಟಲು ಸರ್ಕಾರ ಅದಕ್ಕೊಂದು ತಿದ್ದುಪಡಿ ಕಾನೂನನ್ನು ತಂದು, ನೀರು ಬಳಕೆದಾರರ ಸಂಘವನ್ನು ಪ್ರತಿ ಹೋಬಳಿ, ಗ್ರಾಮಮಟ್ಟಗಳಲ್ಲಿ ಸ್ಥಾಪಿಸಿದ್ದಾರೆ. ಅದರ ನಿರ್ವಹಣೆಗೆ ಸರ್ಕಾರ ಕನಿಷ್ಠ ₹5 ಲಕ್ಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮ ಸ್ವಾಮಿ ಮಾತನಾಡಿ, ನೀರು ಬಳಕೆದಾರರ ಸಂಘದ ಕಟ್ಟಡ ನಿರ್ಮಾಣ ಮಾಡಲು ಎಲ್ಲ ರೀತಿಯಲ್ಲಿ ಅಧಿಕಾರಿ ವರ್ಗ ಮತ್ತು ರಾಜಕೀಯ ಮುಖಂಡರು ಸಹಾಯ-ಸಹಕಾರ ನೀಡಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಲಲಿತರಾಣಿ ಶ್ರೀರಂಗದೇವರಾಯಲು, ಎಂಜಿನಿಯರ್ ದೊರೆಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಎಚ್.ಎಂ. ವಿರೂಪಾಕ್ಷಯ್ಯ ಸ್ವಾಮಿ, ತಿಪ್ಪೇರುದ್ರ ಸ್ವಾಮಿ, ಶ್ರವಣಕುಮಾರ ರಾಯ್ಕರ್, ಜೆ.ಎನ್. ನಾಗರಾಜ, ವೀರೇಶ, ಮಲ್ಲಿಕಾರ್ಜುನ, ತಿರುಮಲೇಶ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರೈತರು ಉಪಸ್ಥಿತರಿದ್ದರು.