ಸಾರಾಂಶ
ರಾಜಕೀಯದ ಜೊತೆಗೆ ಸಿನೇಮಾ, ಕ್ರೀಡೆ, ಸಂಗೀತದಲ್ಲೂ ಆಸಕ್ತಿ ಹೊಂದಿದ್ದ ಕೃಷ್ಣಾ ಅವರು ಸಮಯ ಮಾಡಿಕೊಂಡು ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಹುಬ್ಬಳ್ಳಿ:
ತಮ್ಮ ಜೀವಿತದುದ್ದಕ್ಕೂ ರಾಜಕೀಯವನ್ನೇ ಉಸಿರಾಡಿದ ಎಸ್.ಎಂ.ಕೃಷ್ಣ ಅವರು ಖ್ಯಾತ ಹಿಂದುಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್ ಅವರ ಅಪ್ಪಟ ಅಭಿಮಾನಿಯಾಗಿದ್ದರು.ರಾಜಕೀಯದ ಜೊತೆಗೆ ಸಿನೇಮಾ, ಕ್ರೀಡೆ, ಸಂಗೀತದಲ್ಲೂ ಆಸಕ್ತಿ ಹೊಂದಿದ್ದ ಕೃಷ್ಣಾ ಅವರು ಸಮಯ ಮಾಡಿಕೊಂಡು ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ದೇಶದ ಹೆಸರಾಂತ ಗಾಯಕರ ಗಾಯನವನ್ನು ಆಲಿಸಿದ್ದ ಅವರು ಡಾ.ಗಂಗೂಬಾಯಿ ಹಾನಗಲ್ ಅವರ ಗಾಯನವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಹಾಗಾಗಿ ಗಂಗೂಬಾಯಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದರು.
ಖಾಸಗೀ ವಾಹಿನಿಯೊಂದು 2002ರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಂಗೂಬಾಯಿ ಅವರನ್ನು ಸನ್ಮಾನಿಸಿದ್ದರು. ಬಳಿಕ ಅವರ ಗಾಯನ ಕೇಳಿ ಮನತುಂಬಿ ಹಾರೈಸಿದ್ದರು.ಮುಂದೆ 2005 ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಗಂಗೂಬಾಯಿ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಅಂದಿನ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ ದಂಪತಿಗಳೊಂದಿಗೆ ಸೇರಿ "ರಾಜಭವನ ಗೌರವ " ನೀಡಿ ಪ್ರೀತಿಯಿಂದ ಸನ್ಮಾನಿಸಿದ್ದರು. ಆಗಲೂ ಗಂಗೂಬಾಯಿ 15 ನಿಮಿಷಗಳ ಕಾಲ ಹಾಡಿ ಅಭಿಮಾನಿ ಕೃಷ್ಣಾ ಅವರ ಆಸೆ ಈಡೇರಿಸಿದ್ದರು. ಮೂರು ದಿನಗಳ ಕಾಲ ಗಂಗೂಬಾಯಿ ಅವರನ್ನು ರಾಜಭವನದ ಅತಿಥಿಯಾಗಿ ಉಳಿಸಿಕೊಂಡು ಉಪಚರಿಸುವ ಮೂಲಕ ತಮ್ಮ ಅಭಿಮಾನವನ್ನು ತೋರಿದ್ದರು.
ಈ ಕಾರ್ಯದಲ್ಲಿ ಆಶಾ ಭೋಂಸ್ಲೆ, ಅನುರಾಧಾ ಪೋಡವಾಲ, ನೌಶಾದ್ ಸೇರಿದಂತೆ ಬಾಲಿವುಡ್ ತಾರಾಗಣ, ಗಾಯಕ ಬಳಗವೇ ಸೇರಿತ್ತು.