ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ದೇಶದ ಆರ್ಥಿಕ ಸುಧಾರಣೆ ಮೂಲಕ ಪಾರದರ್ಶಕ ಆಡಳಿತಕ್ಕೆ ಭದ್ರಬುನಾದಿ ಹಾಕಿದ ಪ್ರಾಮಾಣಿಕ ರಾಜಕಾರಣಿ ಮಾಜಿ ಪ್ರಧಾನಿಗಳಾದ ಡಾ ಮನಮೋಹನ್ ಸಿಂಗ್ ರವರ ನಿಧನ ದೇಶಕ್ಕೆ ಬಹುದೊಡ್ಡ ನಷ್ಟ. ಇಂತಹ ಮೇಧಾವಿ ರಾಜಕಾರಣಿ ಮತ್ತೊಮ್ಮೆ ಹುಟ್ಟಲಿ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವದೂತ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನದಲ್ಲಿ ಮಾಜಿ ಪ್ರಧಾನಿಗಳಾದ ಡಾ ಮನಮೋಹನ್ ಸಿಂಗ್ ರವರಿಗೆ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಹತ್ತು ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಆಡಳಿತ ಮಾಡಿದ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಿದ ಕಾರಣ ಪ್ರತಿಯೊಬ್ಬರಿಗೂ ಪಡಿತರ ಸಿಗುವಂತಾಗಿದ್ದು, ಅನ್ನದಾಹ ನೀಗಿದೆ. ದೇಶದ ಪ್ರತಿಯೊಬ್ಬ ನಿರುದ್ಯೋಗಿಗೆ ಉದ್ಯೋಗ ಸಿಗಬೇಕು, ಬಡ ಕುಟುಂಬಗಳು ಆರ್ಥಿಕವಾಗಿ ಸದೃಢತೆ ಕಾಣಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆ ಬಡವರ ಬದುಕಿಗೆ ಆಸರೆಯಾಗಿದೆ. ಆಡಳಿತದಲ್ಲಿ ಭ್ರಷ್ಟಾಚಾರ ಇರಬಾರದು ಮಾಹಿತಿ ಮುಕ್ತವಾಗಿ ಇರಬೇಕೆಂಬ ಉದ್ದೇಶದಿಂದ ಆರ್ ಟಿಐ ಕಾಯ್ದೆ ಜಾರಿಗೊಳಿಸಿದ ಕಾರಣ, ಮಾಹಿತಿಗಳು ಮುಕ್ತವಾಗಿ ಸಿಗುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ದೇಶವನ್ನು ತಂತ್ರಜ್ಞಾನದಲ್ಲಿ ಮುನ್ನಡೆಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಆಧಾರ್ ಕಾರ್ಡ್ ನಿಯಮ ಜಾರಿಗೊಳಿಸಿ, ದೇಶದ ಪ್ರಜೆಗಳಿಗೆ ಹೆಚ್ಚು ಸಹಕಾರಿಯಾಗಿದೆ. ದೇಶ ಕಂಡ ಅದ್ಭುತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರು ಇಂದಿನ ಯುವ ಪೀಳಿಗೆಗೆ ಮಾದರಿ ಯಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಣ್ಣ, ಶ್ರೀನಿವಾಸ್, ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.