ಸಿಂಗಟಾಲೂರು ಏತ ನೀರಾವರಿ ಯೋಜನೆ: 123 ಎಕರೆಯ ₹8 ಕೋಟಿ ಪರಿಹಾರ ಬಿಡುಗಡೆ

| Published : Jun 15 2024, 01:08 AM IST / Updated: Jun 15 2024, 01:09 AM IST

ಸಿಂಗಟಾಲೂರು ಏತ ನೀರಾವರಿ ಯೋಜನೆ: 123 ಎಕರೆಯ ₹8 ಕೋಟಿ ಪರಿಹಾರ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ವಿಚಾರವಾಗಿ, ಈ ಹಿಂದಿನ ಸರ್ಕಾರ ರೈತರ ಕಡತಗಳು ಪದೇಪದೇ ಅಸಿಂಧು ಆಗುತ್ತಿದ್ದವು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಹಾಗೂ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಸದ್ಯ ಪರಿಹಾರ ಬಿಡುಗಡೆಯಾಗಿರುವುದು ತುಸು ನೆಮ್ಮದಿ ತಂದಿದೆ.

ರೈತರ ಪರಿಹಾರ ಬಿಡುಗಡೆ ಕುರಿತು ಕನ್ನಡಪ್ರಭ ದಿನಪತ್ರಿಕೆ ಸಾಕಷ್ಟು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. 2008ರಿಂದ ಭೂಮಿ ಕಳೆದುಕೊಂಡಿರುವ ರೈತರು ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿರುವ ರೈತರಿಗೆ ನೀರಾವರಿ ನಿಗಮ ಈಗ ಭೂ ಪರಿಹಾರ ಬಿಡುಗಡೆ ಮಾಡಿದೆ.

ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಹೊಳಗುಂದಿ, ನಂದಿಹಳ್ಳಿ, ಮುದೇನೂರು ಮತ್ತು ದಾಸರಹಳ್ಳಿ ಗ್ರಾಮಗಳ 92.08 ಎಕರೆ ಜಮೀನಿಗೆ ಸಂಬಂಧಪಟ್ಟ ₹5.99 ಕೋಟಿ ಹಾಗೂ 60 ಹಾಳ್‌ ತಿಮ್ಲಾಪುರ, 63 ತಿಮ್ಲಾಪುರ, ನವಲಿ ಗ್ರಾಮಗಳ 30.47 ಎಕರೆ ಜಮೀನಿನ ₹2.02 ಕೋಟಿ ಸೇರಿದಂತೆ ಒಟ್ಟು 123.27 ಎಕರೆ ಜಮೀನಿನ ₹8.02 ಕೋಟಿ ಧಾರವಾಡ ನೀರಾವರಿ ನಿಗಮದಿಂದ ಹಣ ಬಿಡುಗಡೆಯಾಗಿದೆ.

ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ವಿಚಾರವಾಗಿ, ಈ ಹಿಂದಿನ ಸರ್ಕಾರ ರೈತರ ಕಡತಗಳು ಪದೇಪದೇ ಅಸಿಂಧು ಆಗುತ್ತಿದ್ದವು. ಇದನ್ನು ತಪ್ಪಿಸಲು ಬಿಜೆಪಿ ಸರ್ಕಾರ ಕಾರ್ಪಸ್‌ ಫಂಡ್‌ ನಿಗದಿಪಡಿಸಿ ಧಾರವಾಡ ನೀರಾವರಿ ನಿಗಮದಲ್ಲಿ ಹಣ ಠೇವಣಿ ಮಾಡಲಾಗಿತ್ತು. ಮತ್ತೆ ರಾಜ್ಯದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಪರಿಹಾರ ವ್ಯವಸ್ಥೆಯೂ ಬದಲಾಯಿತು. ಪರಿಣಾಮ ಭೂ ಪರಿಹಾರ ಕಡತಗಳ ವಿಲೇವಾರಿಗೆ ಆದ್ಯತೆ ಮೇರೆಗೆ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ.

268 ಎಕರೆ ಭೂ ಪರಿಹಾರ ಬಾಕಿ: ಯೋಜನೆಗೆ ಸಂಬಂಧಿಸಿ ಭೂಮಿ ಕಳೆದುಕೊಂಡ ಮಾಗಳ, ಹಗರನೂರು, ಹಿರೇಹಡಗಲಿ ಗ್ರಾಮಕ್ಕೆ ಸೇರಿದ್ದ 73.82 ಎಕರೆ ಜಮೀನು ಹಾಗೂ ಶಿವಲಿಂಗನಹಳ್ಳಿ, ಮಾನ್ಯರ ಮಾಸಲವಾಡ, 60 ಹಾಳ್‌ ತಿಮ್ಲಾಪುರ ಗ್ರಾಮಗಳ 75.98 ಎಕರೆ, ಮಹಾಜನದಹಳ್ಳಿ, ದೇವಗೊಂಡನಹಳ್ಳಿ, ವರಕನಹಳ್ಳಿ, ಶಿವಲಿಂಗನಹಳ್ಳಿ, ಸೋಗಿ, ನಾಗತಿ ಬಸಾಪುರ ಗ್ರಾಮಗಳ 39 ಎಕರೆ ಜಮೀನುಗಳ ಭೂ ಪರಿಹಾರ ವಿತರಣೆಗಾಗಿ ಈ ಕಡತ ವಿವಿಧ ಹಂತದಲ್ಲಿದೆ.

ತುಂಗಭದ್ರಾ ನದಿಯಿಂದ ಕೂಡ್ಲಿಗಿ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಗೆ ಭೂಮಿ ಕಳೆದುಕೊಂಡ ಕೊಟ್ಟೂರು, ಚಪ್ಪದರಹಳ್ಳಿ, ಜೋಳದ ಕೂಡ್ಲಿಗಿ ಗ್ರಾಮಗಳ 5.28 ಎಕರೆ, 63 ತಿಮ್ಲಾಪುರ, 60 ತಿಮ್ಲಾಪುರ, ದೇವಗೊಂಡನಹಳ್ಳಿ, ಹುಗಲೂರು, ಸೋಗಿ, ವರಕನಹಳ್ಳಿ, ಮಹಾಜನದಹಳ್ಳಿ, ಮುಸುಕಿನ ಕಲ್ಲಳ್ಳಿ ಗ್ರಾಮಗಳ 43.82 ಎಕರೆ, ಸೂಲದಹಳ್ಳಿ, ಅಪ್ಪಯನಹಳ್ಳಿ, ಶಿವಪುರ, ಬಣವಿಕಲ್ಲು, ತಿಮ್ಲಾಪುರ, ಕೂಡ್ಲಿಗಿ, ಮೊರಬ, ಪಾಲಯ್ಯನ ಕೋಟೆ, ಕ್ಯಾಸನಕೆರೆ ಗ್ರಾಮಗಳ 30.56 ಎಕರೆ ಜಮೀನಿನ ಭೂ ಪರಿಹಾರ ಬಾಕಿ ಉಳಿದುಕೊಂಡಿದೆ.

ಮುಂಂಡರಗಿ, ಗದಗ ಮತ್ತು ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳ 200 ರಿಂದ 250 ಎಕರೆ ಭೂಮಿಯ ಪರಿಹಾರ ಕಡತಗಳು ಇನ್ನು ವಿವಿಧ ಹಂತದಲ್ಲಿವೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗಾಗಿ 123.27 ಎಕರೆ ಭೂಮಿ ಕಳೆದುಕೊಂಡ ರೈತರಿಗೆ ನೀರಾವರಿ ನಿಗಮದಿಂದ ₹8.02 ಕೋಟಿ ಪರಿಹಾರ ಬಿಡುಗಡೆಯಾಗಿದೆ. ರೈತರಿಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಸಂದಾಯವಾಗುತ್ತಿದೆ ಎನ್ನುತ್ತಾರೆ ವಿಶೇಷ ಭೂಸ್ವಾಧಿಕಾರಿ ಕಚೇರಿ ಎಸ್‌ಡಿಎ ಶೇಕ್ಷಾವಲಿ ಪಾಷ.

ಯೋಜನೆಯ ಕಾಲುವೆಗೆ ಭೂಮಿ ಕಳೆದುಕೊಂಡು 4-5 ವರ್ಷ ಕಳೆದರೂ ಪರಿಹಾರ ಬಂದಿರಲಿಲ್ಲ. ಇದಕ್ಕಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಪರಿಹಾರಕ್ಕಾಗಿ ರೈತರು ಅಲೆದು ಸುಸ್ತಾಗಿದ್ದರು. ಈ ಕುರಿತು ವಿವಿಧ ಪ್ರಗತಿಪರ ಸಂಘಟನೆಯಿಂದ ಹೋರಾಟ ಕೂಡ ಮಾಡಿದ್ದೇವೆ. ಈಗ ಸರ್ಕಾರ ನೀರಾವರಿ ನಿಗಮಕ್ಕೆ ಹಣ ಬಿಡುಗಡೆ ಮಾಡಿ ರೈತರಿಗೆ ನೀಡುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಹೂವಿನಹಡಗಲಿ ಎಐಟಿಯುಸಿ ಸುರೇಶ ಹಲಗಿ.