ಸರ್ಕಾರಿ ಕಚೇರಿಯಲ್ಲಿ ಸಮಯ ಪಾಲನೆಗೆ ರಾಷ್ಟ್ರಗೀತೆ ಗಾಯನ!

| Published : Oct 15 2025, 02:08 AM IST

ಸರ್ಕಾರಿ ಕಚೇರಿಯಲ್ಲಿ ಸಮಯ ಪಾಲನೆಗೆ ರಾಷ್ಟ್ರಗೀತೆ ಗಾಯನ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಬೆಳಗ್ಗೆ ೧೦.೧೫ಕ್ಕೆ ಸರಿಯಾಗಿ ನೀವು ಹೋದರೆ ಅಲ್ಲಿ ಅಧಿಕಾರಿ- ಸಿಬ್ಬಂದಿ ವರ್ಗದವರು ಸೇರಿಕೊಂಡು ಈ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ನಿತ್ಯ ಬೆಳಗ್ಗೆ ೧೦.೧೫ಕ್ಕೆ ತಹಸೀಲ್ದಾರ ಕೊಠಡಿಯಲ್ಲಿ ಮೊಳಗುವ ರಾಷ್ಟ್ರಗೀತೆಕನ್ನಡಪ್ರಭ ವಾರ್ತೆ ಶಿರಸಿ

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನೆಯೊಂದಿಗೆ ರಾಷ್ಟ್ರಗೀತೆ ಹಾಡುವುದನ್ನು ಕೇಳಿದ್ದೇವೆ. ಆದರೆ ಸರ್ಕಾರಿ ಕಚೇರಿಯಲ್ಲಿ ದಿನವೂ ರಾಷ್ಟ್ರಗೀತೆ ಹಾಡುವುದರ ಕುರಿತು ಎಂದಾದರೂ ಕೇಳಿದ್ದೀರಾ? ಅದರಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಗೀತೆ ಹಾಡುವುದು ಎಲ್ಲಿಯೂ ಸಾಮಾನ್ಯವಾಗಿ ಕಂಡು ಬರುವುದಿಲ್ಲ.

ಆದರೆ, ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಬೆಳಗ್ಗೆ ೧೦.೧೫ಕ್ಕೆ ಸರಿಯಾಗಿ ನೀವು ಹೋದರೆ ಅಲ್ಲಿ ಅಧಿಕಾರಿ- ಸಿಬ್ಬಂದಿ ವರ್ಗದವರು ಸೇರಿಕೊಂಡು ಈ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಕೇಳ ಸಿಗದ ಇಂಥ ವಿಶಿಷ್ಟ ಸಂಗತಿ ಶಿರಸಿಯ ತಹಸೀಲ್ದಾರ್ ಕಚೇರಿಯಲ್ಲಿದೆ. ಕಳೆದ 2-3 ತಿಂಗಳ ಹಿಂದೆ ಪಟ್ಟರಾಜ ಗೌಡ ಎನ್ನುವವರು ತಹಸೀಲ್ದಾರ್ ಆಗಿ ಬಂದ ನಂತರದಲ್ಲಿ ಇಂಥದೊಂದು ವಿಶೇಷ ಉಪಕ್ರಮ ಇಲ್ಲಿ ಪ್ರಾರಂಭವಾಗಿದೆ.

ರಾಷ್ಟ್ರಗೀತೆ ಹಾಡುವುದೆಂದರೆ ಸಹಜವಾಗಿಯೇ ಅಲ್ಲಿ ರಾಷ್ಟ್ರಭಕ್ತಿಯ ಜಾಗೃತಿ ಪ್ರೇರೇಪಣೆ ಇದ್ದೇ ಇರುತ್ತದೆ. ಅದರೊಂದಿಗೆ ಬಹುಮುಖ್ಯವಾದ ಇನ್ನೊಂದು ಉದ್ದೇಶವು ಇಲ್ಲಿ ಇದೆ. ಸಮಯ ಪಾಲನೆ. ಸರ್ಕಾರಿ ಕಚೇರಿ ಎಂದರೆ ಸಮಯಕ್ಕೆ ಸರಿಯಾಗಿ ಕೆಲಸ ನಡೆಯುವುದಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. ತಮ್ಮ ಕಚೇರಿಯಲ್ಲೂ ಹೀಗೆ ಆಗುತ್ತಿರುವುದನ್ನು ಗಮನಿಸಿದ ತಹಸೀಲ್ದಾರ್ ಪುಟ್ಟರಾಜ ಗೌಡ ಅದನ್ನು ತಪ್ಪಿಸುವುದಕ್ಕೆ ಕಂಡುಕೊಂಡ ಮಾರ್ಗವೇ ಪ್ರತಿನಿತ್ಯ ರಾಷ್ಟ್ರಗೀತೆ ಹಾಡುವುದು.

ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆ ೧೦.೧೫ಕ್ಕೆ ರಾಷ್ಟ್ರಗೀತೆ ಹಾಡಬೇಕು ಮತ್ತು ಆ ಸಂದರ್ಭದಲ್ಲಿ ಕಚೇರಿಯ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಹಾಜರ್ ಇರಬೇಕು ಎನ್ನುವುದು ಅವರು ನೀಡಿದ ಸೂಚನೆ. ಅಂದಿನಿಂದ ಸಿಬ್ಬಂದಿ ಕಡ್ಡಾಯವಾಗಿ ಇದನ್ನು ಪಾಲಿಸುತ್ತಿದ್ದಾರೆ. ಕಂದಾಯ ಇಲಾಖೆಯ ಸುಮಾರು ೩೦ಕ್ಕೂ ಹೆಚ್ಚು ಸಿಬ್ಬಂದಿ ತಹಸೀಲ್ದಾರ ಕೊಠಡಿಯಲ್ಲಿ ಹಾಜರಿದ್ದು ರಾಷ್ಟ್ರಗೀತೆ ಹಾಡಿ ನಂತರ ತಮ್ಮ ಕೊಠಡಿಯತ್ತ ತೆರಳುತ್ತಾರೆ.ರಾಜ್ಯಮಟ್ಟದಲ್ಲಿ ದ್ವಿತೀಯ

ಈ ಪ್ರಯೋಗದಿಂದ ಕಚೇರಿಯಲ್ಲಿ ಕೆಲಸ ವೇಗವಾಗಿ ನಡೆಯುವಂತಾಗಿದೆ. ಇದರಿಂದ ಭೂಮಿ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿಗೆ ಆಗಸ್ಟ್ ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ದೊರೆತಿದೆ. ಇದರ ಜತೆಯಲ್ಲಿ ತಹಸೀಲ್ದಾರ ಕೊಠಡಿ ವಿವಿಧ ವಿಭಾಗದ ಸಿಬ್ಬಂದಿ ಅಲೆದಾಟ ತಪ್ಪಿಸಲು ಇಂಟರ್‌ಕಾಮ್ ಅಳವಡಿಸಿ ಕಚೇರಿಯ ೧೨ ವಿಭಾಗದವರು ಏನೇ ಇದ್ದರೂ ದೂರವಾಣಿಯಲ್ಲೇ ತಹಸೀಲ್ದಾರಗೆ ತಿಳಿಸುವ ಜನರ ಸಮಸ್ಯೆ ಪರಿಹರಿಸುವ ಕೆಲಸವನ್ನೂ ಮಾಡಲಾಗಿದೆ.