ಗೌರಿ ಗಣೇಶನ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯ ವಿಸರ್ಜನೆಗಾಗಿ ಗುರುತಿಸಿರುವ ಸ್ಥಳವನ್ನು ವೃತ್ತ ನಿರೀಕ್ಷಕ ಕೆ.ಮಲ್ಲೇಶ್ ಹಾಗೂ ಪುರಸಭಾ ಅಧಿಕಾರಿಗಳು ಪರಿಶೀಲಿಸಿದರು.
ಹಾರೋಹಳ್ಳಿ: ಗೌರಿ ಗಣೇಶನ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯ ವಿಸರ್ಜನೆಗಾಗಿ ಗುರುತಿಸಿರುವ ಸ್ಥಳವನ್ನು ವೃತ್ತ ನಿರೀಕ್ಷಕ ಕೆ.ಮಲ್ಲೇಶ್ ಹಾಗೂ ಪುರಸಭಾ ಅಧಿಕಾರಿಗಳು ಪರಿಶೀಲಿಸಿದರು.
ಗಣೇಶನ ಹಬ್ಬದಲ್ಲಿ ಮೂರ್ತಿಗಳನ್ನು ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸುವುದನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹಾರೋಹಳ್ಳಿ ಪಟ್ಟಣ ಸಮೀಪದ ಚಿಕ್ಕ ಕೆರೆ ಬಳಿ ಜಾಗ ಗುರುತಿಸಲಾಗಿದೆ.ಸಾರ್ವಜನಿಕರು ಗಣೇಶನ ವಿಸರ್ಜನೆಯನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಿಸರ್ಜನೆ ಮಾಡದೆ ಪೊಲೀಸ್ ಹಾಗೂ ಪುರಸಭೆ ನಿಗದಿ ಪಡಿಸಿರುವ ಸ್ಥಳದಲ್ಲಿಯೇ ಗಣೇಶನ ವಿಸರ್ಜನೆ ಮಾಡಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲೇಶ್ ತಿಳಿಸಿದರು.
ಪಟ್ಟಣದಲ್ಲಿ ಗಣೇಶ ಚತುರ್ಥಿ ಹಾಗೂ ಉತ್ಸವವನ್ನು ಶಾಂತಿ, ಸೌಹಾರ್ದಯುತವಾಗಿ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪುರಸಭೆ ಮತ್ತು ಪೋಲಿಸ್ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕರ ಸುರಕ್ಷತೆ, ಸಂಚಾರ ವ್ಯವಸ್ಥೆ ಹಾಗೂ ಜನ ಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೆರವಣಿಗೆಯನ್ನು ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಇಲಾಖೆಯ ಷರತ್ತುಗಳಿಗೆ ಅನುಗುಣವಾಗಿ ಪಾಲಿಸಬೇಕೆಂದು ಮಲ್ಲೇಶ್ ಹೇಳಿದರು.ಈ ಸಂದರ್ಭದಲ್ಲಿ ಪುರಸಭಾ ಆರೋಗ್ಯ ನಿರೀಕ್ಷಕ ನಾಗರಾಜ್, ಪುರಸಭೆ ಹಾಗೂ ಪೋಲಿಸ್ ಇಲಾಖೆ ಸಿಬ್ಬಂಧಿಗಳು ಹಾಜರಿದ್ದರು.