ಶಾಬನೂರು ರಿ.ಸ.ನಂ.127/1ಎ1 ಮತ್ತು 1ಎ2ರ ಸ್ವಾಮಿ ವಿವೇಕಾನಂದ ಬಡಾವಣೆ ಜಾಗದಲ್ಲಿ ಏಕ ನಿವೇಶನದ ಅನುಮೋದನೆ ಕುರಿತ ಆಕ್ಷೇಪಣೆ ಬಗ್ಗೆ ಕಂದಾಯ, ಸರ್ವೆ ಮತ್ತು ನಗರ ಯೋಜನಾ ಇಲಾಖೆ, ದೂಡಾ ಹಾಗೂ ಪಾಲಿಕೆಯಿಂದ ತನಿಖೆ ತಂಡ ರಚಿಸಿ, ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಬನೂರು ರಿ.ಸ.ನಂ.127/1ಎ1 ಮತ್ತು 1ಎ2ರ ಸ್ವಾಮಿ ವಿವೇಕಾನಂದ ಬಡಾವಣೆ ಜಾಗದಲ್ಲಿ ಏಕ ನಿವೇಶನದ ಅನುಮೋದನೆ ಕುರಿತ ಆಕ್ಷೇಪಣೆ ಬಗ್ಗೆ ಕಂದಾಯ, ಸರ್ವೆ ಮತ್ತು ನಗರ ಯೋಜನಾ ಇಲಾಖೆ, ದೂಡಾ ಹಾಗೂ ಪಾಲಿಕೆಯಿಂದ ತನಿಖೆ ತಂಡ ರಚಿಸಿ, ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದ ಬಡಾವಣೆಯ ಏಕ ನಿವೇಶನ ಅನುಮೋದನೆ ಕುರಿತಂತೆ ಇರುವ ಆಕ್ಷೇಪಣೆ ಬಗ್ಗೆ ತನಿಖೆಗೆ ಜಿಲ್ಲಾ ಆಡಳಿತಕ್ಕೆ ಪ್ರಾಧಿಕಾರದಲ್ಲಿ ಡಿ.11ರಂದು ನಡೆದ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ವಿವೇಕಾನಂದ ಬಡಾವಣೆಯ ಜಾಗಕ್ಕೆ ಸಂಬಂಧಿಸಿದಂತೆ 1984ರಿಂದ ಇದುವರೆಗಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತನಿಖೆಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪಿತಸ್ಥರೆಂಬುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕಾನೂನಾತ್ಮಕವಾಗಿ ಶಿಸ್ತು ಕ್ರಮವನ್ನು ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಪ್ರಾಧಿಕಾರದಿಂದ ಯಾವುದೇ ತಪ್ಪುಗಳಾಗಿಲ್ಲವೆಂಬುದನ್ನು ಪುನರುಚ್ಛರಿಸುತ್ತಿದ್ದೇವೆ. ಪಾರ್ಕ್ ಜಾಗವನ್ನು ಏಕ ನಿವೇಶನ ಮಾಡಿಕೊಟ್ಟ ಪ್ರಾಧಿಕಾರವೆಂದ ಆರೋಪಗಳಲ್ಲಿ ಹುರುಳಿಲ್ಲ. ದೂಡಾದ ಜವಾಬ್ಧಾರಿಯುತ ಸ್ಥಾನದಲ್ಲಿ ಕುಳಿತು, ಸಮಾಜಕ್ಕೆ ಪಾರದರ್ಶಕ ನಡೆಸಿ, ಪ್ರದರ್ಶಿಸಬೇಕೆಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತನಿಖೆ ತಂಡದಿಂದಲೇ ತನಿಖೆ ನಡೆಸಿ, ವರದಿ ತರಿಸಿಕೊಳ್ಳುವಂತೆ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ಬೆಳೆದು, ಅದೇ ಪಕ್ಷದ ಬಗ್ಗೆ ಕೃತಜ್ಞತೆ ಇಲ್ಲದ ಸ್ವಾರ್ಥ ಫಲಾನುಭವಿ ಶಿವನಹಳ್ಳಿ ರಮೇಶ. ಬಾಯಲ್ಲಿ ಆಚಾರ ಹೇಳುವುದು, ತಿನ್ನುವುದು ಬದನೆಕಾಯಿ ಎಂಬ ಗಾದೆಯನ್ನು ಶಿವನಹಳ್ಳಿ ರಮೇಶರಂತಹವರನ್ನು ನೋಡಿಯೇ ಮಾಡಿರಬೇಕು. ನಮ್ಮ ಪಕ್ಷದ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ, ನಗರಸಭೆ ಸದಸ್ಯ, ಅಧ್ಯಕ್ಷನಾಗಿ, ನಂತರ ಪಾಲಿಕೆ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದ ಶಿವನಹಳ್ಳಿ ರಮೇಶ ಕೃತಜ್ಞತೆ ಇಲ್ಲದ ಸ್ವಾರ್ಥ ರಾಜಕಾರಣಿ ಎಂದು ಟೀಕಿಸಿದರು.

ಹೊಲವನ್ನು ಹದ ಮಾಡಿ, ಬೀಜ ಬಿತ್ತಿ, ಗೊಬ್ಬರ, ನೀರನ್ನು ಹಾಕಿದರೆ ಮಾತ್ರ ಫಲ ಸಿಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಏನನ್ನೂ ಮಾಡದೆ ಶಿವನಹಳ್ಳಿ ರಮೇಶ ಫಲವನ್ನು ಮಾತ್ರವೇ ಪಡೆದ ಸ್ವಾರ್ಥ ರಾಜಕಾರಣಿ. ಹೀಗೆ ಕಾಂಗ್ರೆಸ್ಸಿನಿಂದ ಎಲ್ಲವನ್ನೂ ಅನುಭವಿಸಿದ ಶಿವನಹಳ್ಳಿ ರಮೇಶ ಇಂದು ಬಿಜೆಪಿ ಸೇರ್ಪಡೆಯಾಗಿ, ಕಾಂಗ್ರೆಸ್ ಪಕ್ಷದ ವಿರುದ್ಧವೇ ನಿಂದನೆ ಮಾಡತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ, ಶಿವನಹಳ್ಳಿ ರಮೇಶಗೆ ಸ್ವಲ್ಪವೂ ಕೃತಜ್ಞತೆ ಇಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಎ.ನಾಗರಾಜ, ನಾಗಭೂಷಣ್, ಮಂಗಳಮ್ಮ, ಮಂಜುಳಮ್ಮ, ಕವಿತಾ ಚಂದ್ರಶೇಖರ, ಸುರೇಶ ಜಾಧವ್‌ ಇತರರು ಇದ್ದರು.