ಏಕ ಬಳಕೆಯ ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯ

| Published : Oct 14 2025, 01:00 AM IST

ಸಾರಾಂಶ

ಏಕಬಳಕೆಯ ಪ್ಲಾಸ್ಟಿಕ್ ಪರಿಸರ ಅಪಾಯಗಳಲ್ಲಿ ಒಂದಾಗಿದ್ದು, ಪ್ಲಾಸ್ಟಿಕ್‌ನಿಂದಾಗಿ ಪರಿಸರ ತೊಂದರೆಗಳು ಉಂಟಾಗುತ್ತಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಶಿವಮೊಗ್ಗ: ಏಕಬಳಕೆಯ ಪ್ಲಾಸ್ಟಿಕ್ ಪರಿಸರ ಅಪಾಯಗಳಲ್ಲಿ ಒಂದಾಗಿದ್ದು, ಪ್ಲಾಸ್ಟಿಕ್‌ನಿಂದಾಗಿ ಪರಿಸರ ತೊಂದರೆಗಳು ಉಂಟಾಗುತ್ತಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಫೌಂಡ್ರಿ ಕೈಗಾರಿಕೆಗಳು ಸುಟ್ಟ ಮರಳಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬಳಕೆಯಲ್ಲಿರುವ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳ ಅನುಸರಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಪರಿಸರ ಅಧಿಕಾರಿ ಕೆ.ಶಿಲ್ಪ ಮಾತನಾಡಿ, ಮಂಡಳಿಯ ಸುವರ್ಣ ಮಹೋತ್ಸವವನ್ನು ರಾಜ್ಯಾದ್ಯಂತ ಆಚರಿಸುತ್ತಿದ್ದು, ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳು, ಜೈವಿಕ ವೈದ್ಯಕೀಯ ತ್ಯಾಜ್ಯ, ಪರಿಸರ ಪರಿಣಾಮ ಮೌಲ್ಯಮಾಪನ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಶಬ್ದ ಮಾಲಿನ್ಯ, ಘನತ್ಯಾಜ್ಯ, ಇ ತ್ಯಾಜ್ಯ, ಹಾರು ಬೂದಿ, ನಿರ್ಮಾಣ ಮತ್ತು ಕೆಡವುವಿಕೆ ತ್ಯಾಜ್ಯ ಹೀಗೆ ವಿವಿಧ ತ್ಯಾಜ್ಯ ಪ್ರಕಾರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಕೆ ದಿನೇ ದಿನೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳ ವೈಜ್ಞಾನಿಕ ವಿಲೇವಾರಿಯತ್ತ ಗಮನಹರಿಸಬೇಕು. ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮಾಲಿನ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಂಡಳಿಯ ಜೊತೆ ಎಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳು ಕೈಜೋಡಿಸಬೇಕು ಎಂದರು.

ಫೌಂಡ್ರಿ ಉದ್ಯಮಕ್ಕೆ ನಿರ್ದಿಷ್ಟ ಕ್ರಮಗಳು, ವಾಯು ಹೊರಸೂಸುವಿಕೆ, ಅಪಾಯಕಾರಿ ತ್ಯಾಜ್ಯ ಮತ್ತು ಜಲ ಮಾಲಿನ್ಯವನ್ನು ನಿರ್ವಹಿಸುವ ಅನುಸರಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ನಿವೃತ್ತ ಮುಖ್ಯ ಪರಿಸರ ಅಧಿಕಾರಿ ಕುಮಾರ ಸ್ವಾಮಿ.ಡಿ.ಆರ್ ಮಾತನಾಡಿ, ಕೈಗಾರಿಕಾ ಉದ್ಯಮಿಗಳು ಪರಿಸರ ನಿಯಂತ್ರಣ ಮಂಡಳಿಯ ಅನುಸರಣೆಯ ಪಾಲಿಸುವ ರೂಪರೇಷೆಯನ್ನು ವಿವರಿಸಿದರಲ್ಲದೇ, ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳ ಸಂದೇಹದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿದರು.

ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ಸುಟ್ಟ ಮರಳು ತ್ಯಾಜವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎಲ್ಲಾ ಕೈಗಾರಿಕೆಗಳು ಅನುಸರಣೆ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯ್ಸ್ ರಾಮಾಚಾರ್‌ ಮಾತನಾಡಿ, ಕೈಗಾರಿಕೆಗಳು ಜಲ ಮಾಲಿನ್ಯ, ವಾಯುಮಾಲಿನ್ಯ ತಡೆಗಟ್ಟುವಲ್ಲಿ ಮಂಡಳಿಯ ಆದೇಶಗಳನ್ನು ಪಾಲಿಸಲು ಬದ್ಧವಾಗಿವೆ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಎಸ್.ಎಸ್.ಉದಯ್ ಕುಮಾರ್, ಪ್ರದೀಪ್ ವಿ ಎಲಿ, ರಾಜಶೇಖರ್ ಆರ್, ಜಿ.ವಿ.ಕಿರಣ್ ಕುಮಾರ್, ಡಾ.ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ರವಿಪ್ರಕಾಶ್ ಜೆನ್ನಿ, ಸಹನ ಸುಭಾಷ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.