ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ವಿಶೇಷ ಪರಿಷ್ಕರಣೆಯು ಶೇ.88ರಷ್ಟು ಪೂರ್ಣಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಬಿಟ್ಟು ಹೋದ ಮತದಾರರ ಪರಿಶೀಲನೆ ನಡೆಯುತ್ತಿದೆ ಎಂದು ಮತದಾರರ ನೊಂದಣಾಧಿಕಾರಿ ದಿವಾಕರ ರೆಡ್ಡಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚನ್ನಗಿರಿ

ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ವಿಶೇಷ ಪರಿಷ್ಕರಣೆಯು ಶೇ.88ರಷ್ಟು ಪೂರ್ಣಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಬಿಟ್ಟು ಹೋದ ಮತದಾರರ ಪರಿಶೀಲನೆ ನಡೆಯುತ್ತಿದೆ ಎಂದು ಮತದಾರರ ನೊಂದಣಾಧಿಕಾರಿ ದಿವಾಕರ ರೆಡ್ಡಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗುವ ಮೊದಲು 1.01.056 ಪುರುಷ, 1.02.564 ಮಹಿಳೆಯರು, 8 ಇತರೆ ಸಹಿತ ಒಟ್ಟು 2.03.628 ಮತದಾರರು ಇದ್ದರೂ ಮತದಾರರ ಪಟ್ಟಿಯ ಪರಿಷ್ಕರಣೆಯ ನಂತರ 93,076 ಪುರುಷ ಮತದಾರರು, 92,510 ಮಹಿಳಾ ಮತದಾರರು, 7 ಇತರೆ ಮತದಾರರು ಸಹಿತ ಒಟ್ಟು 1.85.593ಜನ ಮತದಾರರು ಇದ್ದಾರೆ ಎಂದು ವಿವರಿಸಿದರು.

ಈಗಾಗಲೇ ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಅಕ್ಷೇಪಣೆಗೆ ಸೆ.23ರ ವರೆಗೆ ಸಲ್ಲಿಸಲು ಕಾಲಾವಕಾಶ ವಿದ್ದು ಮ್ಯಾಪಿಂಗ್ ಆಗದೆ ಉಳಿದಿರುವ 180 ಮತದಾರರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಬಂದಿದೆ ಎಂದು ಮತದಾರರು ಹೆದರದೇ ನಿಮ್ಮ ಬಳಿ ಇರುವಂತಹ ದಾಖಲೆಗಳನ್ನು ನಿಮ್ಮ-ನಿಮ್ಮ ಭಾಗದ ಬಿಎಲ್‌ಒಗಳಿಗೆ ನೀಡಬೇಕು ಎಂದರು.

ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಲಾಗಿದ್ದು 154ಜನ ಮತದಾರರು ವಿಚಾರಣೆಗೆ ಗೈರಾಗಿದ್ದಾರೆ. ಹಿರಿಯ ನಾಗರೀಕರು, ವಿಶೇಷ ಚೇತನರು, ಆರೋಗ್ಯ ಸಮಸ್ಸೆ ಇರುವಂತವರು ಮತ್ತು ವಿದೇಶದಲ್ಲಿರುವ ಮತದಾರರ ಪರವಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದ್ದು ಉಳಿದ 154ಜನ ಮತದಾರರ ವಿಚಾರಣೆಗೆ ಇನ್ನೊಂದು ದಿನಾಂಕ ನಿಗದಿಪಡಿಸಿ ವಿಚಾರಣೆಯನ್ನು ನಡೆಸಲಾಗುವುದು ಎಂದರು.

ಚುನಾವಣಾ ಆಯೋಗದ ಸೂಚನೆಯಂತೆ ಸೆ.19ಮತ್ತು 20ರಂದು ವಿಶೇಷ ನೊಂದಣಿ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲ ಬಿಎಲ್‌ಓಗಳು ಸದರಿ ದಿನಾಂಕದಂದು ತಮ್ಮ ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಹ ಮತದಾರರ ನೊಂದಣಿ, ತಿದ್ದುಪಡಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ ಎಂದರು.

ಅ.1ರ ವರೆಗೆ 18ವರ್ಷ ತುಂಬಿದ ಅರ್ಹ ಮತದಾರರು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯ ವಿವರಗಳಲ್ಲಿ ಯಾವುದಾದರು ತಿದ್ದುಪಡಿ, ಸ್ಥಳಾಂತರ ಹೊಂದಿದ ಮತದಾರರ ವಿವರ ಹಾಗೂ ಗುರುತಿನ ಚೀಟಿ ಬದಲಾವಣೆಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದು ಎಂದರು. ಕಾಂಗ್ರೆಸ್‌ನ ಮೋಹನ್, ಜೆಡಿಎಸ್ ಅಧ್ಯಕ್ಷ ಜಾವಿದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹಾಜರಿದ್ದರು.