ಮಂಗಳೂರು: ಭಾರತದ ಚುನಾವಣಾ ಆಯೋಗದ ಆದೇಶದಂತೆ ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣ (ಎಸ್‌ಐಆರ್‌) ಜೂ.30ರಿಂದ ಬಿಎಲ್‌ಒಗಳ ಮನೆ ಭೇಟಿಯ ಮೂಲಕ ಆರಂಭಗೊಳ್ಳಲಿದೆ. ಈ ಮನೆ ಭೇಟಿ ಪ್ರಕ್ರಿಯೆ ಜು.29ರ ವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯೂ ಆಗಿರುವ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಈ ಎಸ್‌ಐಆರ್‌ ಜೂ.1ರಿಂದ ಅರ್ಹತಾ ದಿನವನಾಗಿ ಪರಿಗಣಿಸಿ ಪ್ರಕ್ರಿಯೆ ಆರಂಭಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳ ಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯ ಜೂ. 20ರಿಂದ ಜೂ. 29ರ ವರೆಗೆ ನಡೆಯಲಿದೆ. ಬಳಿಕ ಒಂದು ತಿಂಗಳು ಮತಗಟ್ಟೆಅಧಿಕಾರಿಗಳು (ಬಿಎಲ್‌ಒಗಳು) ಮನೆ ಭೇಟಿ ಮಾಡಲಿದ್ದಾರೆ. ಜುಲೈ 29ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ನಡೆಯಲಿದೆ ಎಂದು ಅವರು ಹೇಳಿದರು.ಜಿಲ್ಲೆಯ ಎಂಟು ಅಸೆಂಬ್ಲಿ ಕ್ಷೇತ್ರದ 8 ಜನ ಮತದಾರರ ನೋಂದಣಾಧಿಕಾರಿ (ಇಆರ್‌ಒ), 10 ಸಹಾಯಕ ಮತದಾರರ ನೋಂದಣಾಧಿಕಾರಿ (ಎಇಆರ್‌ಒ), 206 ಮತಗಟ್ಟೆಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ಹಾಗೂ 1876 ಮತಗಟ್ಟೆಮಟ್ಟದ ಅಧಿಕಾರಿಗಳು ಈ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.ಮಂಗಳೂರು ನಗರ ಉತ್ತರ ಮತ್ತು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಪಿಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಹೊರಗುಳಿದಿದ್ದಾರೆ. ಬೆಳ್ತಂಗಡಿಯಲ್ಲಿ 9,637, ಮೂಡುಬಿದಿರೆಯಲ್ಲಿ 20,128, ಮಂಗಳೂರು ನಗರ ಉತ್ತರದಲ್ಲಿ 50558, ಮಂಗಳೂರು ನಗರ ದಕ್ಷಿಣದಲ್ಲಿ 63,853, ಮಂಗಳೂರು ಕ್ಷೇತ್ರದಲ್ಲಿ 25,042, ಬಂಟ್ವಾಳದಲ್ಲಿ 14,430, ಪುತ್ತೂರಿನಲ್ಲಿ 15,802, ಸುಳ್ಯದಲ್ಲಿ 7016 ಮಂದಿ ಮತದಾರರು ಈಗಾಗಲೇ ನಡೆದಿರುವ ಮ್ಯಾಪಿಂಗ್‌ಗೆ ಒಳಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು. ಈ ದಾಖಲೆ ಸಲ್ಲಿಸಬಹುದು: ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ಯಮದ ಕಾಯಂ ಉದ್ಯೋಗಿ, ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ, ಪಿಂಚಣಿ ಸಂದಾಯ ಆದೇಶ, ಭಾರತದಲ್ಲಿ 1987ರ ಜು.1ರ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಜೀವವಿಮಾ ನಿಗಮ, ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಗುರುತಿನ ಚೀಟಿ, ಪ್ರಮಾಣ ಪತ್ರ ಅಥವಾ ದಸ್ತಾವೇಜು, ಸಕ್ಷಮ ಪ್ರಾಧಿಕಾರ ನೀಡಿರುವ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್‌, ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾನಿಲಯಗಳು ನೀಡಿರುವ ಮೆಟ್ರಿಕ್ಯುಲೇಶನ್‌ ಶೈಕ್ಷಣಿಕ ಪ್ರಮಾಣ ಪತ್ರ, ರಾಜ್ಯ ಸಕ್ಷಮ ಪ್ರಾಧಿಕಾರ ನೀಡಿರುವ ಖಾಯಂ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರಿ ನೀಡಿರುವ ಒಬಿಸಿ, ಪ.ಜಾ., ಪ.ಪಂ. ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌, ರಾಜ್ಯ, ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ರಿಜಿಸ್ಟರ್‌, ಸರ್ಕಾರ ನೀಡಿರುವ ಯಾವುದೇ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ

ಪರಿಷ್ಕರಣೆ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಆಕರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಹಾಗೂ ಭಾರತದ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪ್ರಕ್ರಿಯೆ ಹೇಗೆ?: ಜೂ.4ರಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರಿದ್ದು, ಜೂ. 16ರವರೆಗೆ ಸೇರ್ಪಡೆಗೊಳ್ಳುವ ಎಲ್ಲ ಮತದಾರರು ಈ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡುತ್ತಾರೆ. ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳು ತೆರಳಿ ಗಣತಿ ನಮೂನೆಯ 2 ಪ್ರತಿಗಳನ್ನು ನೀಡಲಿದ್ದಾರೆ. ಬಿಎಲ್‌ಒಗಳ ಹಸ್ತಾಕ್ಷರವಿರುವಂತಹ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇರಿಸಿಕೊಂಡು ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಇರುವಂತೆ ಹೆಸರು, ಮತಗಟ್ಟೆಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಆ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಮತದಾರರ ಭಾವಚಿತ್ರ ಹಳೆಯದಾಗಿದ್ದರೆ, ಬಿಎಲ್‌ಗಳು ನೀಡಿರುವ ಪ್ರತಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. 2002ರ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಭರ್ತಿ ಮಾಡಲು ಮತದಾರರಿಗೆ ಸಹಕರಿಸಲು ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಸೌಕರ್ಯ ಕೇಂದ್ರ (ವೋಟರ್‌ ಫೆಸಿಲಿಟೇಶನ್‌ ಸೆಂಟರ್‌)ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು. ಎಸ್‌ಐಆರ್‌ ಪ್ರಕ್ರಿಯೆ ವೇಳಾಪಟ್ಟಿ


-ಜೂ.30ರಿಂದ ಜು.29ರವರೆಗೆ ಮತಗಟ್ಟೆಅಧಿಕಾರಿಗಳಿಂದ ಮನೆ ಮನೆ ಭೇಟಿ.-ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟ.

-ಆ.5ರಿಂದ ಸೆ.4 ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ.

-ಆ.8ರಿಂದ ಅ.3ರವರೆಗೆ ನೋಟೀಸ್‌ ಹಂತ ಮತ್ತು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ.

-ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ.