ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತದ ಪ್ರಕ್ರಿಯೆ ಯಲ್ಲಾಪುರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಗಿದಿದ್ದು, ಕರಡು ಮತದಾರರ ಪಟ್ಟಿಯನ್ನು ಬಿಎಲ್‌ಓಗಳಿಗೆ ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತದ ಪ್ರಕ್ರಿಯೆ ಯಲ್ಲಾಪುರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಗಿದಿದ್ದು, ಕರಡು ಮತದಾರರ ಪಟ್ಟಿಯನ್ನು ಬಿಎಲ್‌ಓಗಳಿಗೆ ವಿತರಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸೆ.೨೩ ರವರೆಗೆ ಸಲ್ಲಿಸಲು ಅವಕಾಶವಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೆ.ಎಚ್. ಪಾಂಡು ಹೇಳಿದರು.

ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿ, ಕ್ಷೇತ್ರದಲ್ಲಿ ಒಟ್ಟು ೧,೮೯,೫೨೮ ಮತದಾರರಿದ್ದು, ಶೇ.೯೫ ರಷ್ಟು ಮ್ಯಾಪಿಂಗ್ ಮುಗಿದಿದೆ. ಮರಣ, ಶಾಶ್ವತ ವಲಸೆ ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಹೆಸರು ಇರುವುದು ಮುಂತಾದ ಕಾರಣಗಳಿಂದ ಒಟ್ಟು ೧೬,೧೦೨ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಂದಿರುವ ೧೦,೧೧೫ ಮತದಾರರ ಹೆಸರು, ವಯಸ್ಸು ಇತ್ಯಾದಿ ವಿಷಯಗಳು ನ್ಯೂನತೆಯಿಂದ ಕೂಡಿದ್ದು, ಅದನ್ನು ಸರಿಪಡಿಸಲು ಬಿಎಲ್‌ಓಗಳು ಸಂಬಂಧಿತ ಮತದಾರರ ಮನೆಗೆ ನೋಟಿಸ್ ನೀಡಲಿದ್ದಾರೆ. ನಿಗದಿತ ದಿನದಂದು ಆಧಾರ್ ಕಾರ್ಡ್, ಶಾಲಾ ಪ್ರಮಾಣಪತ್ರ ಇತ್ಯಾದಿ ದಾಖಲೆಗಳೊಂದಿಗೆ ವಿಚಾರಣಾ ಕೇಂದ್ರಕ್ಕೆ ಹಾಜರಾಗಿ ಸರಿಪಡಿಸಿಕೊಳ್ಳಬಹುದು ಎಂದರು.

ಎರಡನೇ ಹಂತದ ಈ ಪ್ರಕ್ರಿಯೆಯಲ್ಲಿ ಅ. ೧ಕ್ಕೆ ೧೮ ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ವಲಸೆ, ವಿವಾಹ ಇತ್ಯಾದಿ ಕಾರಣಗಳಿಂದ ಮತಗಟ್ಟೆಯನ್ನು ಬದಲಾಯಿಸಿಕೊಳ್ಳುವವರೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದ ಅವರು, ಎಸ್‌ಐಆರ್ ನಂತರ ಯಲ್ಲಾಪುರದಲ್ಲಿ ೨, ಮುಂಡಗೋಡಿನಲ್ಲಿ ೭, ಬನವಾಸಿಯಲ್ಲಿ ೩ ಸೇರಿ ಒಟ್ಟು ೧೨ ಮತಗಟ್ಟೆಗಳು ಹೊಸದಾಗಿ ಸ್ಥಾಪನೆಯಾಗಲಿವೆ. ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ ೨೪೬ಕ್ಕೆ ಏರಿದೆ ಎಂದರು.

ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಎಸ್‌ಐಆರ್ ಪ್ರಕ್ರಿಯೆಯ ಯಲ್ಲಾಪುರ ಕ್ಷೇತ್ರದ ನೋಡಲ್ ಅಧಿಕಾರಿ ಸತೀಶ, ತಹಸೀಲ್ದಾರ ಕಚೇರಿಯ ಚುನಾವಣಾ ವಿಭಾಗದ ಗೀತಾ, ಪ್ರಮೋದ ಉಪಸ್ಥಿತರಿದ್ದರು.