ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಎಂಬುದು ನಾಗರಿಕರ ಹಕ್ಕು ಕಸಿದುಕೊಳ್ಳುವ ಪ್ರಭುತ್ವದ ವ್ಯವಸ್ಥಿತ ಹುನ್ನಾರವಷ್ಟೇ ಅಲ್ಲದೆ ಸಂವಿಧಾನವನ್ನು ಮುಗಿಸುವ ದಾಳಿಯೆಂದು ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಏರ್ಪಡಿಸಿದ್ದ ಮತಪಟ್ಟಿ ವಿಶೇಷ ಪರಿಷ್ಕರಣೆ ಪ್ರಭುತ್ವದ ಹುನ್ನಾರಗಳು ಹಾಗೂ ಸಂವಿಧಾನ ಜಾಗೃತಿ ಅಭಿಯಾನದ ಸಂವಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಎಂಬುದು 140 ಕೋಟಿ ಭಾರತೀಯರ ಮೇಲಿನ ಕೇಂದ್ರ ಸರ್ಕಾರ ಮಾಡಿರುವ ಎಫ್‌ಐಆರ್ ಎಂದರೆ ತಪ್ಪಿಲ್ಲ. ಇದು ಬಡವರು, ದಲಿತರು, ಮಹಿಳೆಯರು ಮತ್ತು ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ, ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಶಾಸನವಾಗಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಅಕ್ಷರಶಃ ಎಸ್‌ಐಆರ್ ಮೂಲಕ ಭಾರತದ ಬಡವರ ಮೇಲೆ ನೇರವಾದ ಯುದ್ಧ ಸಾರಿದೆ. ಸರ್ಕಾರವು ಅಸಾಧ್ಯವಾದ ದಾಖಲೆಗಳನ್ನು ಕೇಳುವ ಮೂಲಕ ಜನಸಾಮಾನ್ಯರನ್ನು, ವಿಶೇಷವಾಗಿ ಅಂಚಿನಲ್ಲಿರುವ ದಲಿತರು, ಅಲ್ಪಸಂಖ್ಯಾತರನ್ನು ಪೌರತ್ವದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಬಿಹಾರ ತಮಿಳುನಾಡು ಉತ್ತರ ಪ್ರದೇಶದಲ್ಲಿ ಈಗಾಗಲೇ ನಡೆದ ಪರಿಷ್ಕರಣೆಗಳಲ್ಲಿ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿದೆ. ಈ ಪ್ರಕ್ರಿಯೆ ಮುಗಿಯುವಾಗ 20-25 ಕೋಟಿ ಜನರು ಪಟ್ಟಿಯಿಂದ ಹೊರಗುಳಿಯಬಹುದು. ಆ ಮೂಲಕ ಆರ್‌ಎಸ್‌ಎಸ್ ಬಯಸುವಂತೆ ಬಿಜೆಪಿ ಪೂರ್ಣ ಬಹುಮತ ಪಡೆದು ನಂತರದಲ್ಲಿ ಎಲ್ಲಾ ವರ್ಗಗಳಿಗೂ ಮತದಾನದ ಹಕ್ಕಿನ ಮೂಲಕ ಸಮಾನತೆಯ ಬದುಕು ಕೊಟ್ಟಿರುವ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಎಚ್ಚರಿಸಿದರು.ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರವು ತನ್ನ ಗುಪ್ತ ಅಜೆಂಡಾ ಜಾರಿಗೊಳಿಸಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಕೂಡ ದೊಡ್ಡ ದನಿಯಲ್ಲಿ ವಿರೋಧ ವ್ಯಕ್ತಪಡಿಸಿರುವುದನ್ನು ದೇಶವಾಸಿಗಳು ಕಂಡಿದ್ದಾರೆ. ಎಸ್‌ಐಆರ್ ಅನ್ನು ಕೂಡ ಇದೇ ಆಯೋಗವನ್ನು ಬಳಸಿಕೊಂಡು ಅಧಿಕೃತಗೊಳಿಸಲಾಗುತ್ತಿದೆ. ಇದಕ್ಕೆ ದಸಂಸ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಂದು ಗುಡುಗಿದರು.ದಸಂಸ ಮಾಜಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ ಮತಪಟ್ಟಿ ಪರಿಷ್ಕರಣೆಯನ್ನು ಯಾರೂ ಕೂಡ ವಿರೋಧಿಸುತ್ತಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಮಾನದಂಡಗಳು ಸೂಕ್ತವಲ್ಲ. ಈ ದೇಶದ ಬಹುಸಂಖ್ಯಾತ ಜನರ ಬಳಿ ಅವರ ಪೂರ್ವಜರು, ಅವರ ದಾಖಲೆಗಳೇ ಇಲ್ಲ. ಹೀಗಿರುವಾಗ ಈ ದೇಶದ ನಾಗರಿಕ ಎನ್ನುವುದಕ್ಕೆ ಯಾವುದಾದರೂ ಪುರಾವೆ ಕೊಡಬೇಕೆಂದು ಷರತ್ತು ವಿಧಿಸಿರುವುದು ದೊಡ್ಡ ಹುನ್ನಾರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಸಂಘಟನಾ ಸಂಚಾಲಕ ಬಿ.ವಿ.ವೆಂಕಟರವಣಪ್ಪ, ಎನ್.ಎ.ವೆಂಕಟೇಶ್, ಖಜಾಂಚಿ ಜಿ.ವಿ.ಗಂಗಪ್ಪ, ಗೌರಿಬಿದನೂರಿನ ಪಿ.ನರಸಿಂಹಮೂರ್ತಿ, ಚಿಕ್ಕಬಳ್ಳಾಪುರದ ಡಿ.ಎನ್.ಪರಮೇಶ್, ಶಿಡ್ಲಘಟ್ಟ ತಿರುಮಳಪ್ಪ, ಗುಡಿಬಂಡೆ ರಮಣ, ಚೇಳೂರು ನರಸಿಂಹಪ್ಪ ಇದ್ದರು.

ಸಿಕೆಬಿ-2 ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮತಪಟ್ಟಿ ವಿಶೇಷ ಪರಿಷ್ಕರಣೆ ಪ್ರಭುತ್ವದ ಹುನ್ನಾರಗಳು ಹಾಗೂ ಸಂವಿಧಾನ ಜಾಗೃತಿ ಅಭಿಯಾನದ ಸಂವಾದ ವಿಚಾರ ಸಂಕಿರಣದಲ್ಲಿ ಚಿಂತಕ ಶಿವಸುಂದರ್ ಮಾತನಾಡಿದರು.