ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ತತ್ವ, ಸಿದ್ದಾಂತ, ಆದರ್ಶ ಹಾಗು ತಂತ್ರಜ್ಞಾನ ಕೌಶಲವನ್ನು ಎಲ್ಲ ಎಂಜಿನಿಯರ್‌ಗಳು ಅಳವಸಿಡಿಕೊಂಡು ದೇಶದ ಅಭಿವೃದ್ದಿಗಾಗಿ ಅವರ ಮಾದರಿಯಲ್ಲಿ ಶ್ರಮಿಸಬೇಕು ಎಂದು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ದೊಡ್ಡಕುರುಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಜಿ.ಟಿ.ಟಿ.ಸಿ ಕಾಲೇಜು ಆವರಣದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 164ನೇ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಯಂಚಾಲಿತ ಗೇಟ್ ನಿರ್ಮಾಣವಿಶ್ವೇಶ್ವರಯ್ಯ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಸಾಧನೆ ಶಾಶ್ವತ. ಪುಣೆಯ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಾದ ನೀರಾವರಿ ಹಾಗೂ ಪ್ರವಾಹ ತಡೆಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು 1903ರಲ್ಲಿ ಸ್ವಯಂಚಾಲಿತ ನೀರಿನ ಪ್ರವಾಹ ಗೇಟ್‌ಗಳನ್ನು ವಿನ್ಯಾಸಗೊಳಿಸಿ ಅದಕ್ಕೆ ಪೇಟೆಂಟ್ ಪಡೆದಿದ್ದರು. ಇದನ್ನು ಮೊದಲು ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ಥಾಪಿಸಲಾಯಿತು. ಮೈಸೂರಿನ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ ಶ್ರೇಯಸ್ಸು ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕದಲ್ಲಿ ಕೃಷ್ಣರಾಜಸಾಗರ ಜಲಾಶಯ ನಿರ್ಮಿಸುವುದರಿಂದ ಹಿಡಿದು ಹೈದರಾಬಾದ್‌ನಲ್ಲಿ ಪ್ರವಾಹ ತಡೆಗಟ್ಟುವಿಕೆ ಯೋಜನೆರೂಪಿಸುವ ತನಕ ಸರ್.ಎಂ.ವಿಶ್ವೇಶ್ವರಯ್ಯರವರು ಸಾಧನೆ ಮಾಡಿದ್ದರು. ಸರ್.ಎಂ.ವಿ.ರವರು ಅಂದು ನಿರ್ಮಿಸಿದ ಅಣೆಕಟ್ಟೆ, ಕೆರೆಗಳು ಇಂದಿಗೂ ಸುಭದ್ರವಾಗಿದ್ದು, ನೀರಾವರಿ ಹಾಗು ಕುಡಿಯುವ ನೀರಿನ ಮೂಲಕ್ಕೆ ಆಧಾರವಾಗಿವೆ ಎಂದರು.ಎಂಜಿನಿಯರುಗಳ ಕೊಡುಗೆ ಅಪಾರ
ಇಂದಿನ ಎಂಜಿನಿಯರ್ಗಳು ಅಂತಹ ತಂತ್ರಜ್ಞಾನದ ಪರಿಣಿತಿ ಪಡೆಯಬೇಕು. ಇಂಜಿನಿಯರ್ ಗಳು ತಮ್ಮ ಉದ್ಯೋಗವನ್ನು ಕೇವಲ ಸರ್ಕಾರಿ ಸೇವೆ ಎಂದು ಭಾವಿಸದೆ ದೇಶದ ಅಭಿವೃದ್ದಿಗಾಗಿ ಉನ್ನತಿಗಾಗಿ ಶ್ರಮಿಸಬೇಕು. ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಒತ್ತಡಗಳ ನಡುವೆಯೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ನೂತನ ಆವಿಷ್ಕಾರ, ಮೂಲಭೂತಸೌಕರ್ಯಗಳ ಅಭಿವೃದ್ದಿ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ದಾಪುಗಾಲಿಡಲು ಹೆಮ್ಮೆಯ ಇಂಜಿನಿಯರ್ ಗಳ ಕೊಡುಗೆ ಅಪರಿಮಿತ ಎಂದು ಸ್ಮರಸಿದರು.ಜಿ.ಟಿ.ಟಿ.ಸಿ. ತರಬೇತಿ ಕೇಂದ್ರದಲ್ಲಿ ಅತ್ಯತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು, ನಂತರ ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆಮಾಡಿದ ಸಿಬ್ಬಂದಿಗಳಿಗೆ ಶಾಸಕರು ಪ್ರಶಂಸನಾ ಪತ್ರಗಳನ್ನು ನೀಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ಕೆ.ಹೆಚ್.ಪಿ. ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ಜಿ.ಟಿ.ಟಿ.ಸಿ. ಪ್ರಾಂಶುಪಾಲರು ಹರೀಶ್ ಕುಮಾರ್, ನಾರಾಯಣಪ್ಪ, ಮೀನಾಕ್ಷಿ, ಜಯರಾಮ್, ಶಿವಶಂಕರಪ್ಪ, ನಗರಸಭೆ ಉಪಾಧ್ಯಕ್ಷ ಫರೀದ್, ಪಿ.ಡಬ್ಲ್ಯುಡಿ ಪ್ರಕಾಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.